ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಕ್ತದೊತ್ತಡ ನಿಯಂತ್ರಿಸಲು ಜಾಗೃತಿ ಜಾಥಾ

Vishwanath S
Updated On : 12 Apr 2013, 9:21 am

ಕನ್ನಡಪ್ರಭ ವಾರ್ತೆ, ಅರಸೀಕೆರೆ, ಏ.12
ರೆಡ್‌ಕ್ರಾಸ್, ರೋಟರಿ ಸಂಸ್ಥೆ, ಅನಂತ ಸದ್ವಿದ್ಯ ನರ್ಸಿಂಗ್ ಕಾಲೇಜ್, ಜಯಚಾಮರಾಜೇಂದ್ರ ಆಸ್ಪತ್ರೆಯ ದಾದಿಯರು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳ ನೇತ್ವತ್ವದಲ್ಲಿ  ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ರಕ್ತದೊತ್ತಡ ನಿಯಂತ್ರಿಸಿಕೊಳ್ಳಿ ಎಂಬ ಘೋಷಣೆಯೊಂದಿಗೆ ಪಟ್ಟಣದಲ್ಲಿ ಜಾಥಾ  ಆಯೋಜಿಸಲಾಗಿತ್ತು.
ಜಯಚಾಮರಾಜೇಂದ್ರ ಆಸ್ಪತ್ರೆ ಆವರಣದಿಂದ ಹೊರಟ ಜಾಥಾದಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಆರೋಗ್ಯದ  ಬಗ್ಗೆ ಜನರಿಗೆ ಅರಿವು ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಅಂಬೇಡ್ಕರ್ ವೃತ್ತದವರೆಗೆ ಸಾಗಿದರು. ನಂತರ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ.ನಾಗಭೂಷಣ್ ಮಾತನಾಡಿ 2013ರ ಆರೋಗ್ಯ ದಿನಾಚರಣೆ ಘೋಷಣೆ ಅಧಿಕ ರಕ್ತದೊತ್ತಡದ ಬಗ್ಗೆ ಕೇಂದ್ರಿಕೃತವಾಗಿದೆ. ಇದರಿಂದಾಗಿ ಜನರಲ್ಲಿ
ಹೃದಯಾಘಾತ, ಪಾರ್ಶ್ವವಾಯು, ದೃಷ್ಟಿಹೀನತೆ ಹಾಗೂ ಮೂತ್ರಪಿಂಡದ ಕಾಯಿಲೆಗಳಿಗೆ ಜನರು ತುತ್ತಾಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಕ್ತದೊತ್ತಡ ಸುಲಭವಾಗಿ ತಡೆಗಟ್ಟಬಹುದಾದ ಕಾಯಿಲೆಯಾಗಿದ್ದು ಪ್ರಾಥಮಿಕ ಹಂತದಲ್ಲಿಯೇ ಸಮಗ್ರ ವಿಧಾನದ ಮೂಲಕ ಆರೋಗ್ಯ ವರ್ಧನೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ಆರೋಗ್ಯವಂತ ಚಟುವಟಿಕೆ  ಹೆಚ್ಚಿಸುವ ಸಲುವಾಗಿ ದೈಹಿಕ ಶ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕಿವಿಮಾತು  ಹೇಳಿದರು. ರೋಟರಿ ಅಧ್ಯಕ್ಷ ಯೋಗೀಶಾಚಾರ್ ಮಾತನಾಡಿ, ರಕ್ತದೊತ್ತಡ ಅಧಿಕವಾಗಲು ಜನರು ಇತ್ತೀಚಿನ ದಿನಗಳಲ್ಲಿ ಹಣದ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದೆ. ಅಚ್ಚರಿಯೆಂದರೆ ಮನುಷ್ಯನನ್ನು  ಹೊರತುಪಡಿಸಿ ಪ್ರಾಣಿ ಪಕ್ಷಿಗಳಿಗೆ ಈ ಕಾಯಿಲೆ ಬರುವುದಿಲ್ಲ ಎಂಬುದನ್ನು ಮನುಷ್ಯ ಅರ್ಥಮಾಡಿ ಕೊಳ್ಳಬೇಕಿದೆ ಎಂದ ಅವರು ಜಗತ್ತಿನ ಜನರಲ್ಲಿ ನಾಲ್ಕರಲ್ಲಿ ಒಬ್ಬರಿಗೆ ರಕ್ತದೊತ್ತಡದ ಕಾಯಿಲೆ ಇದೆ ಎಂಬುದು ಆತಂಕದ ಸಂಗತಿಯಾಗಿದೆ ಎಂದು ನುಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದಿನೇಶ್, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಪಿಸಿಯೋ ಮಧು ಮಾತನಾಡಿದರು.  ಡಾ.ರೈ, ರೋಟರಿ ಕಾರ್ಯದರ್ಶಿ ಪ್ರವೀಣ್, ಓಂಕಾರಮೂರ್ತಿ, ಅಧಿಕಾರಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement