ಹೆಜ್ಜೇನು ದಾಳಿ: 20 ಜನರಿಗೆ ಗಾಯ
ಹೊಳೆನರಸೀಪುರ: ಯುಗಾದಿಯ ಸಂಪ್ರದಾಯದಂತೆ ಗ್ರಾಮದಲ್ಲಿ ಹೊನ್ನಾರು ಕಟ್ಟುವ ಸಂದರ್ಭದಲ್ಲಿ ವಾದ್ಯದ ಸದ್ದಿಗೆ ಮರದಲ್ಲಿದ್ದ ಹೆಜ್ಜೇನುಗಳು ದಾಳಿ ನಡೆಸಿದ ಪರಿಣಾಮ 9 ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿದ ಕ್ಯಾತನಹಳ್ಳಿ ಸಮೀಪದ ಎಳೇಗೌಡನಕೊಪ್ಪಲು ಗ್ರಾಮದಲ್ಲಿ ಗುರುವಾರ ನಡೆದಿದೆ.ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವಾಗ ದೇವಾಲಯ ಸಮೀಪದಲ್ಲೇ ಇದ್ದ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ವಾದ್ಯದ ಸದ್ದಿಗೆ ಎದ್ದು, ಈ ದಾಳಿ ನಡೆಸಿವೆ. ದಿಢೀರನೆ ನಡೆದ ಈ ಘಟನೆಯಿಂದ ಬೆದರಿದ ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿದರೂ ಬಿಡದ ಹೆಜ್ಜೇನುಗಳು 9ಕ್ಕೂ ಹೆಚ್ಚು ಮಕ್ಕಳೂ ಸೇರಿದಂತೆ 50ಕ್ಕೂ ಹೆಚ್ಚು ಜನರಿಗೆ ಕಚ್ಚಿದೆ. ತೀವ್ರ ಗಾಯಗೊಂಡ 20 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.