ಹೇಳಿಕೆಯಲ್ಲಿ ಹುರುಳಿಲ್ಲ: ಜೈಭೀಮು ಮಂಜು
ಸಕಲೇಶಪುರ: ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿ ಕಂಡಿದ್ದು, ವಿರೋಧಿಗಳ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಜೆಡಿಎಸ್ ಮುಖಂಡ ಜೈಭೀಮು ಮಂಜು ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಮೀಸಲಾತಿ ನಂತರ ನಡೆದ ಚುನಾವಣೆಯಲ್ಲಿ ಎಚ್.ಕೆ ಕುಮಾರಸ್ವಾಮಿ ಆಯ್ಕೆಯಾಗಿದ್ದು, ಇವರ ಅವಧಿಯಲ್ಲಿ ಕ್ಷೇತ್ರದ ದಲಿತ ಕಾಲೋನಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಬಹುತೇಕ ದಲಿತ ಕಾಲೋನಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ ಈ ಬಗ್ಗೆ ಇದುವರೆಗೆ ಯಾರಲ್ಲೂ ಅಸಮಾಧಾನ ಇಲ್ಲದಿದ್ದರೂ ರಾಜಕೀಯ ಲಾಭಕ್ಕಾಗಿ ಪಕ್ಷತೊರೆದಿರುವ ಕೆಲವು ದಲಿತ ಮುಖಂಡರು ಶಾಸಕರ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.ಕ್ಷೇತ್ರದ ದಲಿತ ಕಾಲೋನಿ ಅಭಿವೃದ್ಧಿಗಾಗಿ ವಿಶೇಷ ಘಟಕ ಯೋಜನೆಯಡಿ 5 ವರ್ಷಗಳ ಅವಧಿಯಲ್ಲಿ 2.5 ಕೋಟಿ ರು. ಅನುದಾನ ಬಳಸಿ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ.ದಲಿತರ ಬಹುದಿನದ ಕನಸಾದ ಪಟ್ಟಣದ ಅಂಬೇಡ್ಕರ್ ನಿರ್ಮಾಣಕ್ಕೆ 1.40 ಕೋಟಿ ರು. ಬಿಡುಗಡೆ ಮಾಡುವ ಮೂಲಕ ಬಹುತೇಕ ಕಾಮಗಾರಿ ಮುಕ್ತಾಯ ಮಾಡಲಾಗಿದೆ ಎಂದರು.
ದಲಿತರ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಆಶಕ್ತಿ ತೊರಿರುವ ಶಾಸಕರು ಕಾಲೇಜು ವಿದ್ಯಾರ್ಥಿನಿಯರ ನಿಲಯಕ್ಕೆ ಕೋಟಿ ರು. ಮಂಜೂರು ಮಾಡಿಸಿದ್ದು ಕಟ್ಟಡ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಹೋಬಳಿ ಕೇಂದ್ರಗಳಲ್ಲಿ ಮಿನಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಪುರಸಭೆ ಸದಸ್ಯ ನಿರ್ವಾಣಯ್ಯ, ದೊಡ್ಡನಹಳ್ಳಿ ಈರಯ್ಯ,ಬ್ಯಾಗಡಹಳ್ಳಿ ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಮಾರಯ್ಯ, ಅದಿದ್ರಾವಿಡ ಯುವಕ ಸಂಘದ ಅಧ್ಯಕ್ಷ ನಂಜಯ್ಯ, ಕೆಂಚಯ್ಯ ಇತರರು ಇದ್ದರು.
ಜಿಲ್ಲೆಯಲ್ಲಿ 2 ನಾಮಪತ್ರ ಸಲ್ಲಿಕೆ
ಹಾಸನ: ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳ ಪೈಕಿ ಶುಕ್ರವಾರ ಅರಕಲಗೂಡು ವಿಧಾನಸಭೆ ಕ್ಷೇತ್ರದಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಬಿ.ಸಿ. ರಾಜೇಶ್ ಎಂಬು ವರು ಬಿಎಸ್ಪಿ ಯಿಂದ ನಾಮಪತ್ರ ಸಲ್ಲಿಸಿದ್ದು, ಯೋಗಾ ರಮೇಶ್ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಉಳಿದಂತೆ ಇತರ ಕ್ಷೇತ್ರಗಳಲ್ಲಿ ಶುಕ್ರವಾರವೂ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.