ಹೊಳೆನರಸೀಪುರ: ರಾಜಕೀಯ ಪಕ್ಷಗಳ ಮುಖಂಡರ ಸಭೆ
ಹೊಳೆನರಸೀಪುರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಉಪವಿಭಾಗಧಿಕಾರಿ ಜಗದೀಶ್ ಅಧ್ಯಕ್ಷತೆಯಲ್ಲಿ ನೀತಿ ಸಂಹಿತೆ ವಿಚಾರ ಕುರಿತು ತಾಲೂಕು ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು. ಸಂಜೆ 4.30ಕ್ಕೆ ಆರಂಭವಾದ ಸಭೆಯಲ್ಲಿ ನಾನಾ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದು ಚುನಾವಣೆ ನೀತಿ ಸಂಹಿತೆ ಬಗ್ಗೆ ಮಾಹಿತಿ ಪಡೆದರು.
ಸಭೆಯಲ್ಲಿ ಮಾಹಿತಿ ನೀಡಿದ ಜಗದೀಶ್, ಪ್ರಸಕ್ತ ಚುನಾವಣೆಯಲ್ಲಿ ಚುನಾವಣೆ ಅಧಿಕಾರಿಗಳು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಖರ್ಚು ವೆಚ್ಚಗಳ ಬಗ್ಗೆ ಅಯಾ ದಿನವೇ ಚುನಾವಣಾ ಅಧಿಕಾರಿಗಳಿಗೆ
ಮಾಹಿತಿ ತಲುಪಿಸಬೇಕು ಎಂದರು. ಪ್ರತಿ ಮತಗಟ್ಟೆ ಬಗ್ಗೆ ಅಧಿಕಾರಿಗಳು ಕಟ್ಟೇಚ್ಚರ ವಹಿಸಿದ್ದು ಯಾವೊಂದು ಕಾರಣಕ್ಕೂ ಈ ಭಾರಿ ಅಕ್ರಮ ಮತದಾನ ಮಾಡಲು ಸಾಧ್ಯವಿಲ್ಲ. ಜತೆಗೆ ರಾಜಕೀಯ ಪಕ್ಷಗಳು ನಡೆಸುವ ಅಬ್ಬರದ ಪ್ರಚಾರವಿರಲಿ ಏನೇ ಇರಲಿ ಎಲ್ಲವನ್ನು ಚುನಾವಣಾ ಅಧಿಕಾರಿಗಳು ಗಮನ ಹರಿಸುತ್ತಿರುತ್ತಾರೆ. ಆದ್ದರಿಂದ ರಾಜಕೀಯ ಪಕ್ಷದವರು ಚುನಾವಣೆ ನೀತಿ ಸಂಹಿತೆಯಂತೆ ವರ್ತಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಚುನಾವಣಾ ಅಧಿಕಾರಿಗಳ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದ ಅವರು, ಅದಕ್ಕಾಗಿ ಪ್ರತಿ ಕ್ಷೇತ್ರದಲ್ಲಿ ನಾನಾ ದಳಗಳನ್ನು ರಚಿಸಿ ಇಂದಿನಿಂದಲೇ ತನ್ನ ಕರ್ತವ್ಯ ಆರಂಭಿಸಿದೆ ಎಂದರು. ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಮಂಜುಳಾ, ಇಲಾಖೆ ಅಧಿಕಾರಿಗಳು ಇದ್ದರು.