ಅವೈಜ್ಞಾನಿಕ ಶೌಚ ಇಂಗುಗುಂಡಿ
ಕ.ಪ್ರ. ವಾರ್ತೆ ಆಲೂರು ಏ.13
ಖಾಜಿ ಮೊಹಲ್ಲಾದಲ್ಲಿನ ಶೌಚಗುಂಡಿಯಿಂದಾಗಿ ಇದರ ಸನಿಹದಲ್ಲೇ ಇರುವ ಸಾರ್ವಜನಿಕ ಆಸ್ಪತ್ರೆಯ ರೋಗಿಗಳು, ನೌಕರರಿಗೂ ತೀವ್ರ ತೊಂದರೆಯಾಗುತ್ತಿದೆ. ನೆಮ್ಮದಿಯ ವಿಷಯವೆಂದರೆ ಪಟ್ಟಣ ಪಂಚಾಯ್ತಿ ವತಿಯಿಂದ ಸಕ್ಕಿಂಗ್ ಮಿಷನ್ ಖರೀದಿಸಲಾಗಿದೆ. ಬೇರೆ ತಾಲೂಕುಗಳಲ್ಲಿ ಯುಜಿಡಿಗಳಿಗೆ ಬಸ್ ನಿಲ್ದಾಣಗಳಲ್ಲಿನ ಶೌಚದ ನೀರು ಹರಿದರೆ ಇನ್ನುಳಿದ ತಾಲೂಕುಗಳಲ್ಲಿ ವೈಜ್ಞಾನಿಕವಾಗಿ ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ.
ಅಲ್ಲಿ ವರ್ಷಕ್ಕೊಮ್ಮೆ ಇಂಗು ಗುಂಡಿಗಳನ್ನು ಖಾಲಿ ಮಾಡುತ್ತಾರೆ. ಆದರೆ ಇಲ್ಲಿ ಮಾತ್ರ ತಿಂಗಳಿಗೊಮ್ಮೆ ಖಾಲಿ ಮಾಡಬೇಕಿದೆ. ಇದಕ್ಕೆ ತಗಲುವ ವೆಚ್ಚ ಸಾರಿಗೆ ಇಲಾಖೆ ಭರಿಸಬೇಕು. ಸಾರಿಗೆ ಅಧಿಕಾರಿಗಳಾದರೂ ಈ ಇಂಗು ಗುಂಡಿಯನ್ನು ಸರಿಪಡಿಸಬಹುದಾಗಿದೆ.
ಉದ್ಯಾನವನ ನಿರ್ಮಾಣವಾಗಿಲ್ಲ: ಇನ್ನು ಪಟ್ಟಣದಲ್ಲಿ ಉದ್ಯಾನವನಗಳ ನಿರ್ಮಾಣವಾಗಿಲ್ಲ. ಹೌಸಿಂಗ್ಬೋರ್ಡ್ನಲ್ಲಿರುವ ಏಕೈಕ ಉದ್ಯಾನವನ ಬಿಟ್ಟರೆ ಬೇರೆಲ್ಲೂ ಇಲ್ಲ. ಪಟ್ಟಣದ ಪ್ರತಿ ವಾರ್ಡಿನಲ್ಲೂ ಉದ್ಯಾನವನ ನಿರ್ಮಿಸಬಹುದಾಗಿದೆ. ಆದರೆ ಇಲ್ಲಿ ಆ ಬಗ್ಗೆ ಚಿಂತನೆ ನಡೆದಿಲ್ಲ. ಪಟ್ಟಣದ ಕೋರ್ಟ್ ಸರ್ಕಲ್ ಬಳಿಯಿರುವ ಗಣಪತಿ ಬಾವಿ ಪ್ರದೇಶದಲ್ಲಿ ಸುಂದರ ಉದ್ಯಾನವನ ನಿರ್ಮಿಸುವಂತೆ ಸಾರ್ವಜನಿಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಯಾರೂ ಇತ್ತ ಗಮನಹರಿಸುತ್ತಿಲ್ಲ.
ಈ ಸ್ಥಳದಲ್ಲಿ ಇರುವ ಬಾವಿಯಲ್ಲಿ ಪ್ರತಿ ವರ್ಷ ಗಣೇಶನ ವಿಸರ್ಜನೆ ಮಾಡಲಾಗುತ್ತಿದ್ದು, ಆ ಸಂದರ್ಭದಲ್ಲಿ ಮಾತ್ರ ಈ ಸ್ಥಳವನ್ನು ಸ್ವಲ್ಪ ಮಟ್ಟಿಗೆ ಸ್ವಚ್ಛಗೊಳಿಸುತ್ತಾರೆ. ನಂತರ ಇದನ್ನು ಹೇಳುವವರು, ಕೇಳುವವರು ಯಾರೂ ಇರುವುದಿಲ್ಲ. ಇದರಿಂದಾಗಿ ಈ ಸ್ಥಳ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಮಾರ್ಪಟ್ಟಿದೆ.
ಇಲ್ಲಿರುವ ಹಳ್ಳದಲ್ಲಿ ಕೊಳಚೆ ನೀರು, ತ್ಯಾಜ್ಯ ವಸ್ತುಗಳು ಸೇರಿ ದುರ್ನಾತ ಬೀರುವಂತಾಗಿದೆ. ವಿಪರೀತ ಸೊಳ್ಳೆಗಳು ಇಲ್ಲಿ ಉತ್ಪತ್ತಿಯಾಗಿ ಸುತ್ತಮುತ್ತಲ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಈ ಸ್ಥಳವನ್ನು ಸಮತಟ್ಟುಗೊಳಿಸಲು ಪಟ್ಟಣ ಪಂಚಾಯ್ತಿಯವರು ಲಕ್ಷಾಂತರ ರು. ವ್ಯಯಿಸಿದ್ದು, ಸಮತಟ್ಟು ಮಾಡಿದ ಪ್ರದೇಶದ ಮೇಲೆ ಮನೆಗಳನ್ನು ಕೆಡವಿದ ಇಟ್ಟಿಗೆ ಮಣ್ಣು ಕಟ್ಟಡಗಳ ನಿರ್ಮಾಣಕ್ಕೆ ತೆಗೆದ ಮಣ್ಣು ತಂದು ಸುರಿಯಲಾಗಿದೆ. ಇದನ್ನು ಪ್ರಶ್ನಿಸುವವರು ಯಾರೂ ಇಲ್ಲದಂತಾಗಿದೆ.
ಹಲವು ಮರಗಳ ಮಾರಣ ಹೋಮ: ಸ್ವಾತಂತ್ರ್ಯ ಬಂದು 66 ವರ್ಷ ಕಳೆದರೂ ಆಲೂರಿನಲ್ಲಿ ಕೇವಲ ಒಂದೇ ಒಂದು ಉದ್ಯಾನವನವಿದ್ದು, ಅದು ಸಹ ಅಭಿವೃದ್ಧಿ ಕಾಣದೇ ಇರುವುದು ದುರಂತವೇ ಸರಿ. ಪಟ್ಟಣದಲ್ಲಿ ನೆರಳು ನೀಡುತ್ತಿದ್ದ ಹಲವು ಮರಗಳ ಮಾರಣ ಹೋಮ ಈಗಾಗಲೇ ನಡೆದು ಹೋಗಿದೆ. ಮುಖ್ಯ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿದ್ದು, ಈ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿರುವ ಮರಗಳು ಸದ್ಯವೇ ತೆರವುಗೊಳ್ಳಲಿವೆ. ಆ ಮರಗಳು ತೆರವುಗೊಂಡವೆಂದರೆ ನೆರಳು ಎಂಬುದು ಮರೀಚಿಕೆ.
ಕೇವಲ ಪ್ರತಿಭಟನೆಗೆ ಸೀಮಿತ: ಬೇಸಿಗೆಯ ರುದ್ರನರ್ತನ ಆರಂಭವಾಗಿದ್ದು, ನೆರಳಿಗಾಗಿ ಜನತೆ ಪರದಾಡಬೇಕಾದ ಪರಿಸ್ಥಿತಿ ಬಂದಿದೆ. ಎಲ್ಲ ತಾಲೂಕು ಕೇಂದ್ರಗಳಲ್ಲೂ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯ ಭರದಿಂದ ಸಾಗಿದ್ದರೆ, ಆಲೂರಿನಲ್ಲಿ ಮಾತ್ರ ಈವರೆಗೂ ಒಂದೇ ಒಂದು ಗಿಡ ನೆಡುವ ಕಾರ್ಯ ಪ್ರಾರಂಭವಾಗಿಲ್ಲ. ತಾಲೂಕಿನಲ್ಲಿ ಹಲವು ಸಂಘ ಸಂಸ್ಥೆಗಳಿದ್ದು, ಅವುಗಳು ಕೇವಲ ಪ್ರತಿಭಟನೆ ನಡೆಸಲು ಮಾತ್ರ ಸೀಮಿತವಾಗಿವೆ ಎಂದರೆ ತಪ್ಪಾಗದು.
ಸಾಮಾಜಿಕ ಅರಣ್ಯ ಇಲಾಖೆಯಿಂದ ಲಕ್ಷಾಂತರ ಗಿಡಗಳನ್ನು ಗ್ರಾಮೀಣ ಭಾಗದಲ್ಲಿ ನೆಡುತ್ತಿದ್ದು, ಅವುಗಳಲ್ಲಿ ಎಷ್ಟು ಗಿಡಗಳು ಬೆಳದು ಮರಗಳಾಗಿವೆ ಎಂಬುದೇ ಬ್ರಹ್ಮರಹಸ್ಯ. ಅರಣ್ಯ ಇಲಾಖೆಯಲ್ಲಿ ಉಚಿತವಾಗಿ ಸಿಗುವ ಗಿಡಗಳನ್ನು ಪಟ್ಟಣ ಪ್ರದೇಶದಲ್ಲಿ ಅದರಲ್ಲೂ ರಸ್ತೆ ಬದಿಗಳಲ್ಲಿ ನೆಟ್ಟು ಬೆಳೆಸುವ ಕಾರ್ಯ ಮೊದಲಾಗಬೇಕಿದೆ.
ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿ ಜೊತೆಗೆ ಸಂಘ ಸಂಸ್ಥೆಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಕೈ ಜೋಡಿಸಬೇಕಿದೆ. ಈ ಕೆಲಸ ಶೀಘ್ರಾತಿಶೀಘ್ರವಾಗಿ ಆಗಬೇಕಿದೆ. ಅರೆ ಮಲೆನಾಡು ಪ್ರದೇಶವಾದರೂ ಇಲ್ಲಿ ಉಷ್ಣಾಂಶ 39 ಡಿಗ್ರಿ ಆಗಿದ್ದು, ಧಗೆ ವಿಪರೀತ ಹೆಚ್ಚಿದೆ.
ತಾಪಮಾನ ದಿನ ದಿನಕ್ಕೆ ಏರುತ್ತಿದ್ದರೂ ಕೇವಲ ಶಪಿಸುತ್ತ ಇದ್ದ ಮರಗಿಡಗಳನ್ನು ತಾವೇ ಕಡಿದು ಪ್ರಕೃತಿ ಮಾತೆಗೆ ಪ್ರತಿನಿತ್ಯ ತೊಂದರೆ ನೀಡುವುದನ್ನು ಬಿಟ್ಟು ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಉದ್ಯಾನವನಗಳ ಸ್ಥಾಪನೆ ಹಾಗೂ ಗಿಡಮರಗಳನ್ನು ಉಳಿಸಿ ಬೆಳೆಸಬೇಕಿರುವುದು ಎಲ್ಲರ ಕರ್ತವ್ಯವಾಗಿದೆ.