ಹೊನ್ನಾರು ಸಂಪ್ರದಾಯಕ್ಕೆ ರೈತರ ಮುನ್ನುಡಿ
ಕ.ಪ್ರ. ವಾರ್ತೆ ಅರಸೀಕೆರೆ ಏ.13
ಪ್ರತಿಬಾರಿಯಂತೆ ಈ ಬಾರಿಯೂ ಯುಗಾದಿ ಹಬ್ಬದ ಆಚರಣೆಯ ದಿನವೇ ರೈತರು ಉತ್ತಮ ಮಳೆ ಬೆಳೆ ಆಗಲಿ ಎಂದು ಭಗವಂತನನ್ನು ಪ್ರಾರ್ಥಿಸಿ ಹೊನ್ನಾರು ಹೂಡುವ ಸಂಪ್ರದಾಯಕ್ಕೆ ಮುನ್ನುಡಿ ಬರೆದರು.
ತಾಲೂಕಿಗೆ ಸಮೀಪದ ಬಾಳೇನಹಳ್ಳಿ, ದಮ್ಮೆಗೊಂಡಿ, ಬೆಳಗುಂಬ, ಕಾಳೇನಹಳ್ಳಿ, ಕೋಡಿಹಳ್ಳಿ, ಜ್ಯೋತಿಮಲ್ಲಾಪುರ, ಕೆಳಗಲ ಹಬ್ಬನಘಟ್ಟ ಸುತ್ತಮುತ್ತಲ ಗ್ರಾಮಸ್ಥರು, ರೈತ ಸಮುದಾಯ ಮುಂಗಾರು ಮುನ್ನವೇ ಕೃಷಿ ಚಟುವಟಿಕೆಗೆ ಬಳಸುವ ಸಾಮಗ್ರಿಗಳಾದ ನೇಗಿಲು, ನೊಗ, ಕುಂಟೆ ಇನ್ನಿತರ ವಸ್ತುಗಳನ್ನು ಶುಭ್ರಗೊಳಿಸಿ ವಿಶೇಷವಾಗಿ ಪೂಜಿಸಿ ಪ್ರಾರ್ಥನೆ ಸಲ್ಲಿಸಿದರು. ಗ್ರಾಮಾಸ್ಥರು ಜಮೀನಿಗೆ ತೆರಳಿ ಉಳುಮೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ ಬಂಗಾರವನ್ನು ಎತ್ತುಗಳಿಗೆ ಮುಟ್ಟಿಸುವ ಮೂಲಕ ಬಂಗಾರದ ಬೆಳೆ ಬರಲೆಂದು ದೇವರಲ್ಲಿ ಮೊರೆ ಇಟ್ಟರು. ಹೊನ್ನಾರನ್ನು ಕರೆತರುವ ಮುನ್ನ ವಿಶೇಷ ಕರಡೆ ವಾದ್ಯ ತಮಟೆಗಳೊಂದಿಗೆ ಊರ ಮುಂದಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೊನ್ನಾರು ಕಟ್ಟುವ ಕಾಯಕಕ್ಕೆ ಚಾಲನೆ ನೀಡಿದರು.