ಕುಡಿವ ನೀರಿನ ಯೋಜನೆ: ಗುತ್ತಿಗೆದಾರರ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ ಸಕಲೇಶಪುರ ಏ.14
ಕುಡಿಯುವ ನೀರಿನ ಬರ ಎದುರಿಸುತ್ತಿರುವ ಬೊಮ್ಮನಕೆರೆ ಗ್ರಾಮಕ್ಕೆ ಜಿಲ್ಲಾಪಂಚಾಯ್ತಿವತಿಯಿಂದ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಪೂರ್ಣಗೊಂಡು ತಿಂಗಳುಗಳೇ ಕಳೆದರೂ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಗುತ್ತಿಗೆದಾರ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕಿ.ಮೀ. ದೂರ ಸಾಗಬೇಕಾಗಿದೆ.
ಗ್ರಾಮದಲ್ಲಿ ಒಂದು ತೆರೆದ ಬಾವಿ ಹಾಗೂ ಒಂದು ಕೈಪಂಪು ಇದ್ದೂ, ಸಮರ್ಪಕವಾಗಿ ನೀರು ಸಿಗದ ಪರಿಣಾಮ ಕಿ.ಮಿ. ದೂರದ ಗದ್ದೆಗಳಿಂದ ನೀರು ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವನ್ನು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದ ಪರಿಣಾಮ ಜಿಪಂ ಗ್ರಾಮಿಣ ಕುಡಿಯವ ನೀರು ಸರಬರಾಜು ಯೋಜನೆ (ಐ.ಎಂ.ಐ.ಎಸ್ ವತಿಯಿಂದ) 10 ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ.
ಮಾರ್ಚ್ನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಹಾಸನದ ಗುತ್ತಿಗೆದಾರರೊಬ್ಬರು ಟೆಂಡರ್ ಪಡೆದಿದ್ದಾರೆ. ಆದರೆ ಮುಂದಿನ ಮಾರ್ಚ್ ತಿಂಗಳವರಗೆ ಟೆಂಡರ್ ಅವಧಿ ಇರುವುದರಿಂದ ನಿಧಾನಗತಿಯಲ್ಲಿ ಕೆಲಸ ಮಾಡುವ ಆಲೋಚನೆ ಹೊಂದಿರುವ ಗುತ್ತಿಗೆದಾರರಿಂದಾಗಿ ಗ್ರಾಮಸ್ಥರಿಗೆ ಸದ್ಯದಲ್ಲಿ ಕುಡಿಯುವ ನೀರಿನ ಲಭ್ಯತೆ ಇಲ್ಲದಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಮಸ್ಥರು ಅತಿ ಶೀಘ್ರ ಕಾಮಗಾರಿ ಮುಕ್ತಾಯ ಮಾಡಿದ್ದರೆ ನೀರಿಗಾಗಿ ಕಿ.ಮೀ. ದೂರ ಅಲೆಯುವುದು ತಪ್ಪುತ್ತಿತ್ತು. ಆದರೆ ಗುತ್ತಿಗೆದಾರರು ಇತ್ತ ಸುಳಿದಿಲ್ಲ ಎಂದು ದೂರಿದ್ದಾರೆ.