ಜಿಲ್ಲೆಯಾದ್ಯಂತ ಅಂಬೇಡ್ಕರ್ ಸ್ಮರಣೆ
ಕನ್ನಡಪ್ರಭ ವಾರ್ತೆ ಹಾಸನ ಏ 14
ನಗರ ಹಾಗೂ ಜಿಲ್ಲಾದ್ಯಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 122ನೇ ಜನ್ಮ ದಿನಾಚರಣೆಯನ್ನು ಭಾನುವಾರ ಸರಳವಾಗಿ ಆಚರಿಸಿ ಗೌರವಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ಸಿಂಗ್, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ವಿವಿಧ ಇಲಾಖಾ ಅಧಿಕಾರಿಗಳು ಮತ್ತು ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ನಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಾನಾ ಸಂಘ ಸಂಸ್ಥ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಮೋಹನ್ರಾಜ್ ಇತರೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜು, ತಾಲೂಕು ಅಧಿಕಾರಿ ಪುರುಷೋತ್ತಮ್, ತಹಸೀಲ್ದಾರ್ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ಚಂದ್ರ ಇತರರು ಇದ್ದರು.
ಕಾಂಗ್ರೆಸ್ ಕಚೇರಿಯಲ್ಲಿ: ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ ಆಚರಿಸಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿದರು. ಕಾಂಗ್ರೆಸ್ ಮುಖಂಡ ಎಸ್.ಎಂ.ಆನಂದ್, ಹಾಸನ ಕ್ಷೇತ್ರ ಅಭ್ಯರ್ಥಿ ಎಚ್.ಕೆ.ಮಹೇಶ್ ಇತರರು ಇದ್ದರು.
ಆಲೂರು ಪಟ್ಟಣದಲ್ಲಿ: ಡಾ.ಅಂಬೇಡ್ಕರ್ ದೇಶಕಂಡ ಮಹಾನ್ ಮಾನವತವಾದಿ ಎಂದು ಪ್ರೊ.ಬಿ.ಕೆ.ಮಂಜಯ್ಯ ತಿಳಿಸಿದರು.ಪಟ್ಟಣದ ಕಸಾಪ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ನಡೆದ ಅಂಬೇಡ್ಕರ್ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಮಾನತೆಯ ಹರಿಕಾರರು. ಅವರು ಕೇವಲ ದಲಿತರಿಗೆ ಸೀಮಿತರಾದವರಲ್ಲ. ಅವರು ಎಲ್ಲಾ ವರ್ಗದವರ ಹಿತಕ್ಕಾಗಿ ಸಂವಿಧಾನ ರಚಿಸಿದ್ದು, ಸ್ವಹಿತ ಸ್ವಜನಪಕ್ಷಪಾತ ಮಾಡದೆ ಎಲ್ಲರಿಗೂ ಅನುಕೂಲವಾಗುವಂತಹ ಹಾಗೂ ಎಲ್ಲರೂ ಒಪ್ಪುವಂತಹ ಸಂವಿಧಾನವನ್ನು ರಚಿಸಿದರು ಎಂದರು.
ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿದರು.
ಕಸಾಪ ಅಧ್ಯಕ್ಷ ಗುಲಾಂ ಸತ್ತಾರ್, ನಿರ್ದೇಶಕ ಗೋಪಾಲಕೃಷ್ಣ, ಎ.ಟಿ.ಮಲ್ಲೇಶ್, ನಿವೃತ್ತ ನೌಕರರ ಸಂಘದ ವೆಂಕಟಯ್ಯ, ಕೃಷ್ಣೇಗೌಡ, ಎಚ್.ಇ.ದ್ಯಾವಪ್ಪ ಮಾತನಾಡಿದರು. ಜಿ.ಕೆ.ವೆಂಕಟೇಶ್, ಗ್ರಂಥಪಾಲಕ ನಾಗರಾಜು, ಪತ್ರಕರ್ತ ಎಂ.ಪಿ.ಹರೀಶ್, ಆದಿಲ್ ಇತರರು ಇದ್ದರು. ಪೃಥ್ವಿ ಸ್ವಾಗತಿಸಿ ವಂದಿಸಿದರು.
ನೀತಿ ಸಂಹಿತೆ ವಿರುದ್ಧ ಅಸಮಾಧಾನ: ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಜನ್ಮ ದಿನಾಚರಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿ ಇರುವ ದೃಷ್ಟಿಯಿಂದ ಕೇವಲ ಸಾಂಕೇತಿಕವಾಗಿ ಆಚರಿಸಲು ಮುಂದಾದ ಸಂದರ್ಭದಲ್ಲಿ ದಲಿತ ಮುಖಂಡ ವೆಂಕಟಯ್ಯ, ದ್ಯಾವಪ್ಪ, ಅರಸಪ್ಪ ಇತರರು ಆಕ್ಷೇಪ ವ್ಯಕ್ತಪಡಿಸಿ ಈ ರೀತಿ ಸಾಂಕೇತಿಕವಾಗಿ ಆಚರಿಸುವ ಅವಶ್ಯಕತೆ ಏನಿತ್ತು. ಇಂಥ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡಲು ಅವಕಾಶವಿಲ್ಲವೆಂದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.