ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಕ್ಷಗಳ ಬಿರುಸಿನ ಪ್ರಚಾರ

Mainashree
Updated On : 14 Apr 2013, 10:58 am

 ಎ.ರಾಘವೇಂದ್ರ ಹೊಳ್ಳ
ಬೇಲೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಕೆಜೆಪಿ ಪ್ರಚಾರದಲ್ಲಿ ನಿರತರಾಗಿದ್ದರೆ, ಜೆಡಿಎಸ್ ಇನ್ನೂ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡದಿರುವುದು ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ.
ತಾಲೂಕಿನಲ್ಲಿ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಹೊರತುಪಡಿಸಿ ಉಳಿದ ಪಕ್ಷಗಳು ತಮ್ಮದೇ ಆದ  ರಾಜಕೀಯ ಲೆಕ್ಕಾಚಾರದೊಂದಿಗೆ ಪ್ರಚಾರದಲ್ಲಿ ನಿರತರಾಗಿದ್ದು ಮತದಾರರ ಓಲೈಕೆಯಲ್ಲಿ ತೊಡಗಿವೆ. ಕಾಂಗ್ರೆಸ್‌ನಿಂದ ವೈ.ಎನ್. ರುದ್ರೇಶ್‌ಗೌಡ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ  ಒಂದು ಸುತ್ತಿನ ಪ್ರಚಾರವನ್ನು ಪೂರೈಸಿದ್ದಾರೆ. ತಮ್ಮ ಅಪಾರ ಬೆಂಬಲಿಗ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪ್ರಚಾರ ಕೈಗೊಂಡಿದ್ದು ಎಲ್ಲರೂ ಒಗ್ಗಟ್ಟಿನ ಮಂತ್ರದೊಂದಿಗೆ ರುದ್ರೇಶ್‌ಗೌಡರಿಗೆ ಸಾಥ್ ನೀಡುತ್ತಿದ್ದಾರೆ.
ತಾಲೂಕಿನಲ್ಲಿ ಇತರೆ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಪ್ರಚಾರದಲ್ಲಿ ಮುಂದಿದ್ದು ಕೆಜೆಪಿ ನಂತರದ ಸ್ಥಾನದಲ್ಲಿದೆ. ಪಟ್ಟಣ ಪುರಸಭೆ ಚುನಾವಣೆಯಲ್ಲಿ ಹಿಂದಿನ ಬಾರಿಗಿಂತ ಒಂದು ಸ್ಥಾನ ಹೆಚ್ಚು ಪಡೆದಿದ್ದ ಕಾಂಗ್ರೆಸ್‌ನಲ್ಲಿ ಈ ಹಿಂದೆ ಇದ್ದ ಒಳ ಜಗಳ ಹಾಗೂ ಮುಖಂಡರ ನಡುವಿನ ವೈಮನಸ್ಸುಗಳಿಗೆ ಅಲ್ಪ ವಿರಾಮ ಹಾಕಿ ಒಗ್ಗಟ್ಟಾಗಿ ದುಡಿಯುತ್ತಿದ್ದಾರೆ.
ರುದ್ರೇಶ್‌ಗೌಡರ ಸರಳ ನಡವಳಿಕೆ, ಅವರ ಕುಟುಂಬಕ್ಕಿರುವ ಹೆಸರು ಹಾಗೂ ಅವರ ಶಾಸಕಾವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಅವರಿಗೆ ಶ್ರೀರಕ್ಷೆಯಾಗಲಿದೆ. ಮಾಜಿ ಜಿಪಂ ಸದಸ್ಯ ವೈ.ಎನ್.ಕೃಷ್ಣೇಗೌಡ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ವೈ.ಟಿ. ದಾಮೋದರ್, ನಗರಾಧ್ಯಕ್ಷ ಪುನಿತ್‌ಗೌಡ ಪ್ರಸನ್ನ, ಗುತ್ತಿಗೆದಾರ ಬಿರಟೆಮನೆ ಸುರೇಶ್ ಮುಂತಾದವರು ರುದ್ರೇಶ್‌ಗೌಡರ ಪರವಾಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಗೌಡರ ಕುಟುಂಬದಿಂದ ಸ್ಪರ್ಧೆ:   ಇದರ ನಡುವೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಿಂದ  ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಬರುತ್ತಾರೆ ಎಂಬ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ. 15 ರ ನಂತರ ಬಿಡುಗಡೆ ಮಾಡುವ ಪಟ್ಟಿಯಲ್ಲಿ ಭವಾನಿ ರೇವಣ್ಣ ಅಥವಾ ಎಚ್.ಡಿ.ರೇವಣ್ಣ ಹೆಸರು ಇರಬಹುದಾದ ಸಾಧ್ಯತೆಯನ್ನು ಪಕ್ಷದ ಹಿರಿಯ ಮುಖಂಡರೇ ಹೇಳುತ್ತಿದ್ದಾರೆ.
ಅಲ್ಲದೆ ಭವಾನಿ ರೇವಣ್ಣ ಮನದಾಳದಲ್ಲಿ ತಾವು ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದಿದೆ ಎಂಬುದು ಅವರ ಆಪ್ತವಲಯದ ಮಾತು. ಇನ್ನೂ ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣ ಅವರನ್ನು ಬಿಟ್ಟು ಬೇಲೂರು ಕ್ಷೇತ್ರಕ್ಕೆ ಎಚ್.ಡಿ. ರೇವಣ್ಣ ಬರುತ್ತಾರೆ ಎಂಬ ಮಾತು ಸಹ ವ್ಯಾಪಕವಾಗಿ ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಪಟ್ಟಿ ಬಿಡುಗಡೆ ಮಾಡುವುದು ವಿಳಂಬವಾಗುತ್ತಾ ಹೋದಂತೆ ಪ್ರಚಾರದ ಸಮಯ ಮೀರುತ್ತಾ ಪ್ರಚಾರಕ್ಕೆ ತೊಡಕಾಗುತ್ತದೆ. ಈಗಾಗಲೆ ಎಲ್ಲಾ ಪಕ್ಷಗಳು ಪ್ರಚಾರದಲ್ಲಿದ್ದು ನಾವು ಇನ್ನು ಕೇವಲ 10 ದಿನದಲ್ಲಿ ಏನು ಪ್ರಚಾರ ಮಾಡುವುದು ಎಂಬುದು ಜೆಡಿಎಸ್ ಕಾರ್ಯಕರ್ತರ ಅಳಲಾಗಿದೆ.
ಕೆಜೆಪಿ ಸದ್ದಿಲ್ಲದೇ ಪ್ರಚಾರ:  ಸದ್ದಿಲ್ಲದೆ ಪ್ರಚಾರ ನಡೆಸುತ್ತಿರುವ ಕೆಜೆಪಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಶಾಸಕ ಎಚ್.ಎಂ. ವಿಶ್ವಾನಥ್ ಅವರೇ ಹೈಲೈಟ್ ಆಗಿದ್ದು ತಾಲೂಕಿನಲ್ಲಿ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ.
ಮಾತಿನ ಜಾಣ್ಮೆ ಹಾಗೂ ಎಲ್ಲರೊಂದಿಗೆ ಬೆರೆಯುವ ಮತ್ತು ಮನಬಿಚ್ಚಿ ಮಾತಾಡುವ ಎಚ್.ಎಂ ವಿಶ್ವನಾಥ್  ಲಿಂಗಾಯಿತ, ಒಕ್ಕಲಿಗ, ದಲಿತರ ಮತಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದಾರೆ. ಬಿಜೆಪಿಯಿಂದ ಲಕ್ಷ್ಮಣಗೌಡ ಅರೇಹಳ್ಳಿ ಕ್ಷೇತ್ರ ಸೇರಿದಂತೆ, ಜಾವಗಲ್ ಹೋಬಳಿ ಹಾಗೂ ಹಳೇಬೀಡು ಸುತ್ತಮುತ್ತ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ.  ಪಕ್ಷೇತರರಾಗಿ ಕೆಜೆಪಿ ಬಂಡಾಯ ಅಭ್ಯರ್ಥಿ ಬಿ.ಶಿವರುದ್ರಪ್ಪ ಕೂಡ ವೀರಶೈವ ಹಾಗೂ ದಲಿತರ ಮತಗಳ ಮೇಲೆ ಕಣ್ಣಿಟ್ಟಿದ್ದು ತಮ್ಮದೇ ಆದ ರಾಜಕೀಯ ತಂತ್ರಗಾರಿಕೆಯೊಂದಿಗೆ ಪ್ರಚಾರದಲ್ಲಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗಮನಾರ್ಹ ಸಾಧನೆ ಮಾಡಿದ್ದಲ್ಲದೆ 25 ಸಾವಿರಕ್ಕೂ ಹೆಚ್ಚಿನ ಮತ ಪಡೆದಿದ್ದರು. ಕೆಜೆಪಿಯಿಂದ ಟಿಕೆಟ್ ನೀಡುವ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ಮೀನಮೇಷದಲ್ಲಿ  ಜೆಡಿಎಸ್
ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವಲ್ಲಿ ಜೆಡಿಎಸ್ ಇನ್ನೂ ಮೀನಾಮೇಷ ಎಣಿಸುತ್ತಿದ್ದು  ಪ್ರತಿನಿತ್ಯ ಒಬ್ಬೊಬ್ಬರ ಹೆಸರು ಕೇಳಿ ಬರುತ್ತಿದ್ದು ಯಾವುದು ಸತ್ಯ, ಯಾವುದು ಮಿಥ್ಯ ಎಂಬ ಗೊಂದಲದಲ್ಲಿ ಕಾರ್ಯಕರ್ತರು ಇದ್ದಾರೆ. ಜಿಲ್ಲಾಧ್ಯಕ್ಷ ಎಚ್.ಕೆ.ಜವರೇಗೌಡರೇ ಮುಂದಿನ ಅಭ್ಯರ್ಥಿ ಎಂದು ಕಳೆದ ಚುನಾವಣೆಯಿಂದಲೇ ಜೆಡಿಎಸ್ ವರಿಷ್ಠರು ಬಿಂಬಿಸುತ್ತಾ ಬಂದಿದ್ದು, ಜವರೇಗೌಡರು ತಾಲೂಕಿನೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದರು. ವರಿಷ್ಠರು ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಹೆಸರು ಸೂಚಿಸಲು ಹಿಂದೆ ಮುಂದೆ ನೋಡುತ್ತಿರುವುದು ಅಚ್ಚರಿಯಾಗಿದೆ. ಅಲ್ಲದೆ ಸ್ಥಳೀಯರಿಗೆ ಎಂಬ ಕೂಗಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಮಾಜಿ ಪುರಸಭಾ ಅಧ್ಯಕ್ಷ ಬಿ.ಸಿ.ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಕೂಡಾ ಹೈಕಮಾಂಡಿಗೆ ಒತ್ತಡ ಹೇರುತ್ತಿದ್ದಾರೆ.
ಗೌಡರ ಕುಟುಂಬದಿಂದ ಸ್ಪರ್ಧೆ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಿಂದ  ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಬರುತ್ತಾರೆ ಎಂಬ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ.   15 ರ ನಂತರ ಬಿಡುಗಡೆ ಮಾಡುವ ಪಟ್ಟಿಯಲ್ಲಿ ಭವಾನಿ ರೇವಣ್ಣ ಅಥವಾ ಎಚ್.ಡಿ.ರೇವಣ್ಣ ಹೆಸರು ಇರಬಹುದಾದ ಸಾಧ್ಯತೆಯನ್ನು ಪಕ್ಷದ ಹಿರಿಯ ಮುಖಂಡರೇ ಹೇಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement