ಪಕ್ಷದ ಚಲನವಲನ ನಿಗಾ ವಹಿಸಿ: ರಾಜೀವ್ ಪಾಂಡೆ
ಚನ್ನರಾಯಪಟ್ಟಣ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ಹಾಗೂ ಪಕ್ಷದ ವತಿಯಿಂದ ನಡೆಯುವ ಎಲ್ಲಾ ಚಲನವಲನಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾ ಚುನಾವಣಾ ವೆಚ್ಚದ ವೀಕ್ಷಕ ರಾಜೀವ್ ಪಾಂಡೆ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳ ಸಭೆ ನಡೆಸಿ ರಾಜಕೀಯ ಪಕ್ಷಗಳು ನಡೆಸುವ ಎಲ್ಲಾ ಸಭೆಗಳ ವಿಡಿಯೋ ಹಾಗೂ ಪೋಟೋಗ್ರಪಿ ಕಡ್ಡಾಯವಾಗಿದ್ದು, ಅದರಲ್ಲಿ ಏನಾದರೂ ಅನ್ಯಾಯ ಅಕ್ರಮಗಳು ಕಂಡು ಬಂದಲ್ಲಿ ತಕ್ಷಣವೇ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ತಪ್ಪದೆ ವೀಕ್ಷಿಸಿ ಅವುಗಳ ಕಟಿಂಗ್ಸ್ ಪಡೆಯಬೇಕು. ವ್ಯಕ್ತಿಗತ ನಿಂದನೆ ಹಾಗೂ ಜಾಹಿರಾತುಗಳು ಪ್ರಕಟವಾಗಿದ್ದಲ್ಲಿ ಅವುಗಳ ಮಾಹಿತಿಯನ್ನು ಚುನಾವಣಾಧಿಕಾರಿಗಳಿಗೆ ಎಂಎಂಸಿ ತಂಡಕ್ಕೆ ನೀಡಬೇಕು ಎಂದು ತಿಳಿಸಿದರು.
ಅಭ್ಯರ್ಥಿಗಳ ಪ್ರಚಾರಕ್ಕಾಗಿ ಹೊರಗಿನಿಂದ ಬರುವ ಗಣ್ಯರು ಹಾಗೂ ಚಿತ್ರನಟರಿಗೆ ಅವರ ಅಭಿಮಾನಿಗಳು ಖರ್ಚು ಮಾಡಿದರೂ ಅದರ ಹಣವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸುವುದು ಲೆಕ್ಕ ಪತ್ರ ಸಮಿತಿಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಕ್ಷೇತ್ರ ಚುನಾವಣಾಧಿಕಾರಿ ಸುರೇಶ್, ಉಪ ವಿಭಾಗಾಧಿಕಾರಿ ಪ್ರಕಾಶ್ ರಜಪೂತ್ ಇದ್ದರು.