ಸುದ್ದಿ ಸಂಕ್ಷೇಪ
ಮಾನವ ಜನ್ಮ ಬಲು ಶ್ರೇಷ್ಠ: ಸ್ವಾಮೀಜಿ
ರಾಮನಾಥಪುರ: ಮಾನವರಾಗಿ ಹುಟ್ಟಿದವರೆಲ್ಲರೂ ಶ್ರೇಷ್ಠರೇ. ಆದರೆ ತಮ್ಮಲ್ಲಿನ ಶ್ರೇಷ್ಠತೆಯನ್ನು ಅರಿತು ಬಾಳಬೇಕೆಂದು ತೇಜೂರು ಮಠದ ಕಲ್ಯಾಣ ಸ್ವಾಮೀಜಿ ಹೇಳಿದರು.ಬಡಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದ ಸಿದ್ಧಗಂಗಾ ಶ್ರೀಗಳ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ಸನಾತನ ಧರ್ಮ ಉಳಿಯಬೇಕಾದರೆ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಅಗತ್ಯ ಎಂದರು. ಟಿ. ಮಾಯಿಗೌಡನಹಳ್ಳಿಯ ಸೋಮಶೇಖರ ಶಿವಾಚಾರ್ಯಸ್ವಾಮೀಜಿ, ಮದ್ದೂರು ಭೀಮನಕೆರೆ ಮಠದ ಸಿದ್ಧಲಿಂಗಸ್ವಾಮೀಜಿ ಅವರು ಸಿದ್ಧಗಂಗಾ ಶ್ರೀಗಳ ಅನ್ನದಾಸೋಹ ಹಾಗೂ ಸಾಧನೆಗಳ ಬಗ್ಗೆ ತಿಳಿಸಿದರು.
ವೀರಶೈವ ಸಮಾಜದ ಮುಖಂಡ ವೀರಪ್ಪಾಜಿ, ಬಸವರಾಜಪ್ಪ, ಗ್ರಾಮಪಂಚಾಯಿತಿ ಸದಸ್ಯ ಯೋಗೇಶ್ ಮುಂತಾದವರು ಉಪಸ್ಥಿತರಿದ್ದರು.
'ಗಾಂಧಿ ತತ್ವ ಇಂದು ಅಗತ್ಯ'
ಚನ್ನರಾಯಪಟ್ಟಣ: ಮನುಕುಲಕ್ಕೆ ಗಾಂಧಿ ತತ್ವ ಇಂದು ಅಗತ್ಯವಾಗಿದೆ ಎಂದು ಗಾಂಧಿ ಭವನದ ಪ್ರೊ. ಜಿ.ಬಿ. ಶಿವರಾಜ್ ಅಭಿಪ್ರಾಯಪಟ್ಟರು. ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಆಯೋಜಿಸಿದ್ದ ಸಾಮಾಜಿಕ ನ್ಯಾಯ ಕುರಿತಂತೆ ಗಾಂಧೀಜಿ ದೃಷ್ಟಿಕೋನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
10 ದಿನಗಳ ಜಾನಪದ ಗೀತಗಾಯನ ಶಿಬಿರ
ಹಾಸನ: ಜಾನಪದ ಪರಿಷತ್ ತಾ. ಘಟಕ, ಹೊಂಬಾಳೆ ಕಲಾ ವೃಂದ(ರಿ) ಮತ್ತು ಕೆಂಪು ಚೆಲುವಾಜಮ್ಮಣಿ ಮಹಿಳಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಏ.21 ರಿಂದ 30ರ ವರೆಗೆ ( 10 ದಿನಗಳ) ಜಾನಪದ ಗೀತಗಾಯನ ಮತ್ತು ಚಿತ್ರಕಲಾ ಶಿಬಿರ ಏರ್ಪಡಿಸಲಾಗಿದೆ. ಆಸಕ್ತಿವುಳ್ಳ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಘದ ಅಧ್ಯಕ್ಷ ದೊಡ್ಡಳ್ಳಿ ರಮೇಶ್ ಅವರಲ್ಲಿ ಹೆಸರು ನೊಂದಾಯಿಸಿ ಕೊಳ್ಳಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ 9945655852, 914117 1425 ಸಂಪರ್ಕಿಸಲು ಕೋರಿದೆ.
ಕರವೇ ಜಿಲ್ಲಾಧ್ಯಕ್ಷರಾಗಿ ಮನುಕುಮಾರ್
ಹಾಸನ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾಗಿ ತಾಲೂಕಿನ ಚಿಕ್ಕಕಡಲೂರು ಗ್ರಾಮದ ಸಿ.ಡಿ. ಮನುಕುಮಾರ್ ನೇಮಕಗೊಂಡಿದ್ದಾರೆ. ಇವರು ಸುಮಾರು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸಿದ್ದಾರೆ. ಸಂಘಟನೆಯಲ್ಲಿ, ಶ್ರದ್ಧೆ ಮತ್ತು ಪ್ರಾಮಾಣಿಕತೆ, ನಿಷ್ಠೆಯಿಂದ ದುಡಿಯುವಂತೆ ಅವರಿಗೆ ಸೂಚಿಸಲಾಗಿದೆ.
ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ
ಹಾಸನ: ಎಲೆ ಮರೆಕಾಯಿಯಂತೆ ತಮ್ಮ ಕಾಯಕವನ್ನು ಪ್ರಾಮಾಣಿಕವಾಗಿ, ಶ್ರದ್ಧೆ, ನಿಷ್ಠೆಯಿಂದ ನಿರ್ವಹಿಸುತ್ತಿದ್ದವರಿಗೆ ನಗರದ ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ಡ್ರೈವರ್ ತಾರಾ ಹಾಗೂ ಪೋಸ್ಟಮನ್ ಶ್ರೀನಿವಾಸ್ ಅವರನ್ನು ಅಂತ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.ಶ್ರೀನಿವಾಸ್ ಮೂಲತಃ ಮಂಡ್ಯ ಜಿಲ್ಲೆಯ ಕಿಕ್ಕೇರಿಯವರಾಗಿದ್ದು, ಇವರು ಹಾಸನದಲ್ಲಿ 1978ರಿಂದಲೂ ಪೋಸ್ಟ್‌ಮನ್ ಆಗಿ ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಬಗ್ಗೆ ಪ್ರಶಂಸಿಸಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಹಾಗೆಯೇ ಮಹಿಳಾ ಚಾಲಕಿ ತಾರಾ ನಗರದಲ್ಲಿ ನಾಲ್ಕು ವರ್ಷಗಳಿಂದ ಆಟೋ ಚಾಲನೆ ಮಾಡುತ್ತಾ ಪುರುಷರಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದನ್ನು ಮೆಚ್ಚಿ ಸನ್ಮಾನಿಸಲಾಯಿತು. ವಕೀಲರಾದ ಗಿರಿಜಾಂಬಿಕೆ, ಪ್ರಾಂಶುಪಾಲ ಶ್ಯಾಮಭಟ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.