ಸುದ್ದಿ ಸಂಕ್ಷೇಪ
125 ಸೂಕ್ಷ್ಮಮತಗಟ್ಟೆಗಳು
ಅರಕಲಗೂಡು: ಈ ವಿಧಾನಸಭಾ ಕ್ಷೇತ್ರದ ಒಟ್ಟು 268 ಮತಗಟ್ಟೆಗಳ ಪೈಕಿ 125 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ.ಈ ಪೈಕಿ 10 ಮತಕಟ್ಟೆಗಳು ಅತಿ ಸೂಕ್ಷ್ಮ, 90 ಮತಗಟ್ಟೆಗಳು ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಿದ್ದು, 25 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ.
ಪಟ್ಟಿ ಸೇರ್ಪಡೆಗೆ 9174 ಅರ್ಜಿ
ಅರಕಲಗೂಡು: ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಹೊಸದಾಗಿ 9174 ಅರ್ಜಿಗಳು ಬಂದಿದ್ದು, ಸೇರ್ಪಡೆ ಕಾರ್ಯ ಬಿರುಸಿನಿಂದ ನಡೆದಿದೆ. ಒಟ್ಟು 1,87,433 ಮತದಾರರಿದ್ದು, ಅದರಲ್ಲಿ 97471 ಪುರುಷ ಹಾಗೂ 89962 ಮಹಿಳಾ ಮತದಾರರಿದ್ದಾರೆ. 1173 ಮತದಾರರ ಹೆಸರು ಕೈಬಿಡಲು ಅರ್ಜಿಗಳು ಬಂದಿದ್ದು, 993 ಅರ್ಜಿಗಳು ತಿದ್ದುಪಡಿಗಾಗಿ ಕೋರಿದ್ದು, ವರ್ಗಾವಣೆಗಾಗಿ 81 ಅರ್ಜಿಗಳು ಬಂದಿವೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಸಂಹಿತೆ: ಬೀಗರ ಊಟಕ್ಕೂ ಕೊಕ್
ಅರಕಲಗೂಡು: ಚುನಾವಣೆ ನೀತಿಸಂಹಿತೆ ವಿವಾಹ ಮಹೋತ್ಸವ ನಂತರ ನಡೆಯುವ ಬೀಗರೂಟಕ್ಕೂ ಅನ್ವಯಿಸಿದೆ. ಯಾವುದೇ ಮಾಂಸದೂಟಕ್ಕೆ ನೀತಿ ಸಂಹಿತೆ ನಿಯಮದನ್ವಯ ಸಾಧ್ಯವಿಲ್ಲ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಬೀಗರೂಟಕ್ಕೆ ವ್ಯಕ್ತಿಯೊಬ್ಬರು ಕೇಳಿದ್ದ ಅನುಮತಿಯನ್ನು ಅವರು ತಿರಸ್ಕರಿಸಿದ್ದಾರೆ.
ವೀರಶೈವರಿಗೆ ಟಿಕೆಟ್: ಆಗ್ರಹ
ಹಳೇಬೀಡು: ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಜನಾಂಗದವರು ಹೆಚ್ಚಾಗಿದ್ದು, ವೀರಶೈವರಿಗೆ ಟಿಕೆಟ್ ನೀಡಬೇಕು ಎಂದು ಹೋಬಳಿ ವೀರಶೈವ ಘಟಕ ಅಧ್ಯಕ್ಷ ಬಿ.ಎಸ್. ಶಿವಕುಮಾರ್ ಆಗ್ರಹಿಸಿದರು. ಪಟ್ಟಣದ ಕಲ್ಪತರು ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಹೋಬಳಿ ವೀರಶೈವ ಸಭೆಯಲ್ಲಿ ಅವರು ಮಾತನಾಡಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 60 ಸಾವಿರ ವೀರಶೈವರಿದ್ದರೂ ಯಾವುದೇ ರಾಜಕೀಯ ಪಕ್ಷವೂ ವೀರಶೈವ ಆಕಾಂಕ್ಷಿಗೆ ಟಿಕೆಟ್ ನೀಡದಿರುವುದು ವೀರಶೈವ ಜನಾಂಗಕ್ಕೆ ಅವಮಾನ ಎಂದರು. ಹೋಬಳಿ ವೀರಶೈವ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಚೇತನ್, ಯೋಗೀಶ್, ಬಿ.ಪಿ. ಪುಟ್ಟರಾಜು, ಮಲ್ಲಿಕಾರ್ಜುನ, ಭಾನುಪ್ರಕಾಶ್, ಈಶ್ವರಪ್ಪ ಇದ್ದರು.
ಜೆಡಿಎಸ್ ಸೇರಿಲ್ಲ: ಪುಟ್ಟಮ್ಮ ಸ್ಪಷ್ಟನೆ
ಚನ್ನರಾಯಪಟ್ಟಣ: ಕಾಂಗ್ರೆಸ್ ಪಕ್ಷ ತೊರೆದು ನಾನು ಜೆಡಿಎಸ್ ಸೇರಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ ಸ್ಪಷ್ಟಪಡಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ಕೆಲವು ಜೆಡಿಎಸ್ ಕಾರ್ಯಕರ್ತರು ನನ್ನನ್ನು ಬಲವಂತವಾಗಿ ಕರೆದೊಯ್ದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸಿ. ಎನ್. ಬಾಲಕೃಷ್ಣ ಅವರಿಂದ ಹೂವಿನಹಾರ ಹಾಕಿಸಿ ಅನಧಿಕೃತವಾಗಿ ನನ್ನನ್ನು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಘೋಷಣೆ ಮಾಡಿದ್ದರು. ನಾನು ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆಯಾಗಿಲ್ಲ, ಕಾಂಗ್ರೆಸ್ನಲ್ಲಿಯೇ ಮುಂದುವರಿಯುತ್ತೇನೆ ಎಂದು ಘೋಷಿಸಿದರು.
ನೀತಿ ಸಂಹಿತೆ ಉಲ್ಲಂಘನೆ: 23 ಮಂದಿ ವಿರುದ್ಧ ದೂರು
ಆಲೂರು: ತಾಲೂಕಿನ ಹೊತನಹಳ್ಳಿಪುರ ಗ್ರಾಮದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ 23 ಮಂದಿಯ ಮೇಲೆ ಸಂಚಾರಿ ವಿಚಕ್ಷಣ ದಳದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಪಟ್ಟಣದ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಪೌರಾಣಿಕ ನಾಟಕದ ಆಯೋಜಕರು ಡ್ರಾಮ ಸೀನರಿಯವರು, ಒಬ್ಬ ಅರ್ಚಕ ಸೇರಿದಂತೆ ಇದಕ್ಕೆ ಸಹಕರಿಸಿದ 23 ಮಂದಿಯ ಮೇಲೆ ಕ್ರಮ ಕೈಗೊಳ್ಳಲು ಉಪವಿಭಾಗಾಧೀಕಾರಿ ಹಾಗೂ ತಹಸೀಲ್ದಾರ್ ಅವರ ಆದೇಶದ ಮೇರೆಗೆ ವೀಚಕ್ಷಣ ಅಧಿಕಾರಿ ಸಂತೋಷ್ಕುಮಾರ್ ಹಾಗೂ ತಂಡ ಕ್ರಮ ಕೈಗೊಂಡಿದ್ದಾರೆ.
ಬಿ.ಎ.ಜೆ.ಪಿ ಅಭ್ಯರ್ಥಿ ನಾಮಪತ್ರ
ಅರಕಲಗೂಡು: ಭಾರತೀಯ ಅಂಬೇಡ್ಕರ್ ಜನತಾಪಕ್ಷದ ಅಭ್ಯರ್ಥಿಯಾಗಿ ಜೆ.ಹೊಸಳ್ಳಿಯ ಮಂಜುನಾಥ ನಾಮಪತ್ರ ಸಲ್ಲಿಸಿದ್ದಾರೆ.ಇದೇ ಮೊದಲ ಬಾರಿಗೆ ಬಿ.ಎ.ಜೆ.ಪಿ. ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಂಜುನಾಥ್ ಬಿ.ಎ.ಜೆ.ಪಿ ಯ ಜಿಲ್ಲಾ ಅಧ್ಯಕ್ಷರೂ ಆಗಿದ್ದು, ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಾಗಿ ಅವರು ತಿಳಿಸಿದ್ದಾರೆ.
ಎರಡು ನಾಮಪತ್ರಗಳ ಸಲ್ಲಿಕೆ
ಅರಕಲಗೂಡು: ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷದಿಂದ ಬಿ.ಸಿ.ರಾಜೇಶ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎಚ್.ಯೋಗಾರವುಶ್ ನಾಮಪತ್ರ ಸಲ್ಲಿಸಿದ್ದಾರೆ.
ಬಿ.ಸಿ.ರಾಜೇಶ್ ಎರಡನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಈ ಹಿಂದೆ ಅವರು 2004ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ಸರ್ಕಾರಿ ನೌಕರರಾದ, ಪಕ್ಷೇತರ ಅಭ್ಯರ್ಥಿ ಎಚ್.ಯೋಗಾರವುಶ್ ಅವರು ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ತಮ್ಮ ಸರ್ಕಾರಿ ವೃತ್ತಿಗೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.