ಕೈನಲ್ಲಿ ಬಂಡಾಯ ಸ್ಫೋಟ
ಹಾಸನ: ರಾಜಕೀಯ ಜಿದ್ದಾಜಿದ್ದಿಗೆ ಮತ್ತೊಂದು ಹೆಸರು ಹಾಸನ ಜಿಲ್ಲೆ. ವಿಧಾನಸಭೆ ಚುನಾವಣೆ ದಿನದಿನಕ್ಕೆ ರಂಗೇರುತ್ತಿದೆ. ಮಳೆಯಾಗದಿದ್ದರೂ ನಾಮಪತ್ರಗಳ ಸುರಿಮಳೆಯಂತೂ ಆಗುತ್ತಿದೆ.
ಹೊಳೆನರಸೀಪುರ ಕ್ಷೇತ್ರದಿಂದ ಎಚ್.ಡಿ. ರೇವಣ್ಣ, ಅರಕಲಗೂಡಿನಿಂದ ಎ.ಟಿ.ರಾಮಸ್ವಾಮಿ, ಅರಸೀಕೆರೆಯಿಂದ ಮಾಜಿ ಸಚಿವ ಬಿ. ಶಿವರಾಂ ಸೇರಿದಂತೆ ಹತ್ತಾರು ಪ್ರಮುಖರು ನಾಮಪತ್ರ ಸಲ್ಲಿಸುವ ಮೂಲಕ ಬಹಿರಂಗ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಾಮಪತ್ರ ಸಲ್ಲಿಸುವ ಕೊನೆ ದಿನಾಂಕ ಇನ್ನೆರಡು ದಿನಗಳಿದ್ದರೂ ರಾಜಕೀಯ ಪಕ್ಷಗಳು ನಿರುಮ್ಮಳವಾಗಿ ಪ್ರಚಾರ ಮಾಡುವಂತಿಲ್ಲ. ನಾನಾ ಅಡೆತಡೆಗಳನ್ನು ಎದುರಿಸಿ ಚುನಾವಣೆ ಎದುರಿಸಬೇಕಾಗಿದೆ.
2004 ರ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 25 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ನೀಡಿದ್ದ ಬಿ. ಶಿವರುದ್ರಪ್ಪ ಕೇವಲ ವೀರಶೈವ ಸಮುದಾಯದಲ್ಲಿ ಅಷ್ಟೇ ಅಲ್ಲ. ಎಲ್ಲಾ ವರ್ಗದ ಜನರಲ್ಲೂ ಉತ್ತಮ ಅಭಿಪ್ರಾಯ ಹೊಂದಿದ್ದಾರೆ.
ಹಠಾತ್ ಬೆಳವಣಿಗೆಯಲ್ಲಿ: ಆದರೆ ಹಠಾತ್ ಬೆಳವಣಿಗೆಯಲ್ಲಿ ಜೆಡಿಎಸ್ನಿಂದ ಕೆಜೆಪಿಗೆ ಬಂದ ಎಚ್.ಎಂ. ವಿಶ್ವನಾಥ್ ಅವರಿಗೆ ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಯಡಿಯೂರಪ್ಪನವರೆ, ಶಿವರುದ್ರಪ್ಪನವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಅಂತಿಮ ಗಳಿಗೆಯಲ್ಲಿ ವಿಶ್ವನಾಥ್ಗೆ ಟಿಕೆಟ್ ನೀಡಿರುವುದು ಶಿವರುದ್ರಪ್ಪನವರಿಗೆ ತೀವ್ರ ಬೇಸರ ಉಂಟು ಮಾಡಿದೆ.
ಪರಿಣಾಮವಾಗಿ ಶಿವರುದ್ರಪ್ಪ ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಕೆಜೆಪಿ ಅಭ್ಯರ್ಥಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ. ಸ್ವತ: ಶಿವರುದ್ರಪ್ಪನವರೇ ಕೆಜೆಪಿಗೆ ಬಂಡಾಯವಾಗಿ ಸ್ಪರ್ಧಿಸುತ್ತಿಲ್ಲ. ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರೂ ಅವರ ಸ್ಪರ್ಧೆ ಒಂದು ರೀತಿಯಲ್ಲಿ ಬಂಡಾಯವೇ ಎಂದು ರಾಜಕೀಯವಾಗಿ ಹೇಳುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ.
ಕಾಂಗ್ರೆಸ್ನಲ್ಲೂ ಬಂಡಾಯದ ಭೀತಿ: ಸಕಲೇಶಪುರ ಮೀಸಲು ಕ್ಷೇತ್ರ ಮತ್ತು ಶ್ರವಣಬೆಳಗೊಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಂಡಾಯ ಎದುರಿಸಬೇಕಾದ ಸಾಧ್ಯತೆಗಳು ಹೆಚ್ಚಾಗಿದೆ. ಸಕಲೇಶಪುರ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದ 20 ಕ್ಕೂ ಹೆಚ್ಚು ಮಂದಿ ಹಾಸನದ ಖಾಸಗಿ ಹೊಟೇಲ್ನಲ್ಲಿ ಸೋಮವಾರ ಸಂಜೆ ಸಭೆ ನಡೆಸಿ, ಬಂಡಾಯ ಅಭ್ಯರ್ಥಿಯನ್ನು ನಿಲ್ಲಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್ಗಾಂಧೀ ಅವರ ಭಾವಚಿತ್ರಗಳನ್ನು ಪ್ರದರ್ಶಿಸುತ್ತಾ ಪ್ರಚಾರ ಮಾಡಿ ಚುನಾವಣೆ ಎದುರಿಸಬೇಕೆಂದು ನಿರ್ಧರಿಸಲಾಗಿದೆ. ಡಿ.ಸಿ. ಸಣ್ಣಸ್ವಾಮಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಂಭವವಿದೆ.
ಗೋಪಾಲಸ್ವಾಮಿ ಬಂಡಾಯ: ಶ್ರವಣಬೆಳಗೊಳದಿಂದ ಕಾಂಗ್ರೆಸ್ ಟಿಕೆಟ್ ಪಡೆದಿರುವ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡರಿಗೂ ಚುನಾವಣೆ ಸುಲಭವಾಗಿಲ್ಲ. ಪಕ್ಷಾಂತರಿಗಳಿಗೆ ಟಿಕೆಟ್ ನೀಡಬಾರದು. ಮೂಲ ಕಾಂಗ್ರೆಸಿಗರಿಗೆ ಟಿಕೆಟ್ ನೀಡಬೇಕೆಂದು ಅಂತಿಮ ಕ್ಷಣದವರೆಗೂ ಹೋರಾಟ ನಡೆಸಿದ ಎ.ಎಂ. ಗೋಪಾಲಸ್ವಾಮಿ ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಕೆಜೆಪಿಯಿಂದ ನಾಮಪತ್ರ ಸಲ್ಲಿಸಿರುವುದು ಕಾಂಗ್ರೆಸ್ ವಲಯದಲ್ಲಿ ಅಚ್ಚರಿ ಮಾತ್ರವೇ ಅಲ್ಲ, ಪುಟ್ಟೇಗೌಡರಿಗೆ ನಡುಕ ಉಂಟಾಗುವಂತೆ ಆಗಿದೆ.
ಗೋಪಾಲಸ್ವಾಮಿ ಪಕ್ಷೇತರರಾಗಿ ಸ್ಪರ್ಧಿಸಿದ್ದರೂ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸುವುದು ಪ್ರಮುಖ ಉದ್ದೇಶವಾಗಿದೆ. ಇದೊಂದು ರೀತಿಯಲ್ಲಿ ಬಂಡಾಯವೇ ಎಂಬುದು ಶ್ರವಣಬೆಳಗೊಳ ಕ್ಷೇತ್ರದ ಕೆಲ ಮೂಲ ಕಾಂಗ್ರೆಸಿಗರ ವ್ಯಾಖ್ಯಾನ.
ಬಿಜೆಪಿ ಬಾವುಟದಲ್ಲಿ ಯಾವ ಗುರುತು ಇದೆ ಎಂಬುದೇ ಗೊತ್ತಿಲ್ಲದ ಹಾಸನ ನಗರದ ಪಿಚ್ಚರ್ ಪ್ಯಾಲೇಸ್
ಚಿತ್ರಮಂದಿರದ ಮಾಲೀಕ ಎಂ.ಬಿ. ಗುರುಪ್ರಸಾದ್ ಅವರಿಗೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್
ನೀಡಿರುವುದು ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಇದ್ದ ಅಲ್ಪಸ್ವಲ್ಪ ಉತ್ಸಾಹವನ್ನು ಹಾಳು ಮಾಡಿದಂತೆ ಆಗಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಬಿಜೆಪಿಗಾಗಿ ಹಲವಾರು ವರ್ಷಗಳಿಂದ ದುಡಿದಿರುವ ಎಂ.ಕೆ. ಕಮಲಕುಮಾರ್, ಹುಡಾ ಅಧ್ಯಕ್ಷ ನವಿಲೆ ಅಣ್ಣಪ್ಪ, ಲೋಹಿತ್ಕುಂದೂರು ಮತ್ತಿರರರು ಟಿಕೆಟ್ ಆಕಾಂಕ್ಷಿಗಳಾಗಿದ್ದರು.
ಜೆಡಿಎಸ್ನಲ್ಲಿ ಗೊಂದಲಮಯ: ಏಕೋ ಏನೋ... ಜೆಡಿಎಸ್ ವರಿಷ್ಠರು ಹಾಸನ ಮತ್ತು ಬೇಲೂರು ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ತೀವ್ರ ಗೊಂದಲ ಮಾಡಿಕೊಂಡಿದ್ದಾರೆ. ಸೋಮವಾರ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಂದ ಎಚ್.ಎಸ್. ಪ್ರಕಾಶ್ಗೆ ಫಾರಂ ಸಿಗದ ಪರಿಣಾಮ ನಿರಾಶೆಯಿಂದ ತಮ್ಮ ಅಪಾರ ಕಾರ್ಯಕರ್ತರೊಂದಿಗೆ ಹಿಂತಿರುಗಬೇಕಾಗಿದೆ. ಅಲ್ಲದೇ ಬೇಲೂರಿನಲ್ಲಿ ಅಭ್ಯರ್ಥಿ ಯಾರೆಂಬುದು ಇರಲಿ. ಯಾರು ಅಭ್ಯರ್ಥಿಯಾಗಬಹುದು ಎಂಬ ವಿಚಾರ ಪಕ್ಷ ಮುಖಂಡರಿಗೆ ತಿಳಿಯುತ್ತಿಲ್ಲ. ಇದರ ಪರಿಣಾಮ ಅಲ್ಲಿಂದ ಅವರು ನಿಲ್ಲಬಹುದು, ಇಲ್ಲಿಂದ ಇವರು ನಿಲ್ಲಬಹುದು ಎಂಬ ಚರ್ಚೆ ನಡೆಯುತ್ತಿದ್ದು, ಇದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.ರೇವಣ್ಣನವರದ್ದು ಒಂದು ರೀತಿಯಲ್ಲಿ ನಿಗೂಢ ವ್ಯಕ್ತಿತ್ವ, ಸಿಟ್ಟು, ಸೆಡವುಗಳನ್ನು ಈಗಲಾದರೂ ಬಿಟ್ಟು ಜನರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ಕೇವಲ 7 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರವನ್ನು ಗೊಂದಲ ಮಾಡಿಕೊಂಡಿರುವುದು ಏಕೆ ಎಂಬುದು ನಿಗೂಢವಾಗಿದೆ.
-ದಯಾಶಂಕರ ಮೈಲಿ