ನಿರ್ವಹಣೆ ಇಲ್ಲದೆ ಸೊರಗಿದ ಕ್ರೀಡಾಂಗಣ
ಕನ್ನಡಪ್ರಭ ವಾರ್ತೆ,ಆಲೂರು,ಏ.15
ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾಗಿರುವ ತಾಲೂಕು ಕ್ರೀಡಾಂಗಣ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.
ನಿರ್ಮಾಣವಾಗಿ ವರ್ಷಗಳೇ ಕಳೆದರೂ ಜನಪ್ರತಿನಿಧಿಗಳ ಸ್ವಾರ್ಥದಿಂದಾಗಿ ಕ್ರೀಡಾಂಗಣ ಹಾಳು ಬಿದ್ದಿದೆ. ಕಳೆದ ವರ್ಷ ಉದ್ಘಾಟನೆಗೊಂಡ ಈ ತಾಲೂಕು ಕ್ರೀಡಾಂಗಣ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿದ್ದು, ಜನರ ತೆರಿಗೆ ಹಣ ಯಾವ ರೀತಿ ವೃಥಾ ಪೋಲಾಗುತ್ತಿದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.
ಸರ್ಕಾರದಿಂದ ಮಂಜೂರಾಗಿದ್ದ 70 ಲಕ್ಷ ರು. ಸಾಲದು ಎಂಬಂತೆ ಇದಕ್ಕೆ ಶಾಸಕರೂ ತಮ್ಮ ಅನುದಾನದಲ್ಲಿ 5 ಲಕ್ಷ ರು. ನಿರ್ಮಾಣ ಕಾಮಗಾರಿಗೆ ನೀಡಿದ್ದಾರೆ. ಇಷ್ಟು ಹಣ ಬಿಡುಗಡೆಯಾದರೂ ಕ್ರೀಡಾಂಗಣ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಗ್ಯಾಲರಿ ಹಾಗೂ ಅದರ ತಳಭಾಗದಲ್ಲಿ ಕಟ್ಟಲಾಗಿರುವ ಕೊಠಡಿಗಳು ಬಿರುಕು ಬಿಚ್ಟು ಮಳೆ ನೀರು ಒಳಗೆ ಉಳಿಯುತ್ತಿದೆ.
ಮೈದಾನಕ್ಕೆ ಚೂಪುಕಲ್ಲುಗಳ ಕಲ್ಲು ಮಣ್ಣು: ಸರಿಯಾದ ರೀತಿಯಲ್ಲಿ ಕ್ಯೂರಿಂಗ್ ಮಾಡದ ಕಾರಣ ಗಾರೆಯೆಲ್ಲ ಕಿತ್ತು ಬರುತ್ತಿದೆ.
ಗ್ಯಾಲರಿ ಹಾಗೂ ಕಟ್ಟಡಗಳ ಕಥೆ ಹಾಗಿರಲಿ, ಮುಖ್ಯವಾಗಿ ಬೇಕಾದ ಮೈದಾನ ಸಮತಟ್ಟಾಗಿಲ್ಲ. ಕ್ರೀಡಾಂಗಣದ ಮೈದಾನಕ್ಕೆ ಆಟವಾಡಲು ಯೋಗ್ಯವಾದ ಉತ್ತಮ ಮಣ್ಣನ್ನು ಹಾಕದೆ ಚೂಪುಕಲ್ಲುಗಳಿಂದ ಕೂಡಿರುವ ಕಲ್ಲು ಮಣ್ಣನ್ನು ತಂದು ಹಾಕಲಾಗಿದೆ.
ಇದರಿಂದಾಗಿ ಆಟವಾಡಲು ತೀವ್ರ ತೊಂದರೆಯಾಗುತ್ತಿದ್ದು, ಕ್ರೀಡಾಪಟುಗಳು ಎಷ್ಟೋ ಬಾರಿ ಇಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಇದರಿಂದಾಗಿ ಆಟವಾಡಲು ಕ್ರೀಡಾಪಟುಗಳು ಹೆದರುತ್ತಾರೆ.
ಕೆಸರುಗದ್ದೆ ಕ್ರೀಡಾಂಗಣ: ಮಳೆಗಾಲದಲ್ಲಿ ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕ್ರೀಡಾಂಗಣ ಕೆಸರು ಗದ್ದೆಯಾದಂತಾಗುತ್ತದೆ. 75 ಲಕ್ಷ ರು.ನಲ್ಲಿ ಗುತ್ತಿಗೆದಾರರು ಏಕೆ ಕ್ರೀಡಾಂಗಣದಲ್ಲಿ ಚರಂಡಿ ನಿರ್ಮಿಸಿಲ್ಲ.
ಫೆವಿಲಿಯನ್ ಬ್ಲಾಕ್ 25.20 ಲಕ್ಷ ರು, ಜಿಮ್ನಾಶಿಯಂ ಬ್ಲಾಕ್ 7.30 ಲಕ್ಷ ರು, ಅಥ್ಲೆಟಿಕ್ ಟ್ರ್ಯಾಕ್ 14.85 ಲಕ್ಷ ರು. ಕಾಂಪೌಂಡ್ ಹಾಗೂ ತಂತಿ ಬೇಲಿಗೆ 8.50 ಲಕ್ಷ ರು., ಗ್ಯಾಲರಿ 15.35 ಲಕ್ಷ ರು., ಇತರೆ ಖರ್ಚು (ಪರಿವೀಕ್ಷಣಾ ವೆಚ್ಚ ಸೇರಿ) 3.80 ಲಕ್ಷ ರು. ಸೇರಿದಂತೆ ಒಟ್ಟು 75 ಲಕ್ಷ ರು. ಖರ್ಚು ಮಾಡಲಾಗಿದೆ. ಇದರಲ್ಲಿ ಅಥ್ಲೆಟಿಕ್ ಟ್ರ್ಯಾಕ್ ಇಲ್ಲವೇ ಇಲ್ಲ. ಎಲ್ಲವೂ ಕಳಪೆ ಕಾಮಗಾರಿಯೇ. ಇದರಲ್ಲಿ ಗುತ್ತಿಗೆದಾರನಿಗೆ 62.06 ಲಕ್ಷ ರು. ನೀಡಲಾಗಿದೆ.
ಕಳಪೆ ಕಾಮಗಾರಿ: ಈ ಹಣದಲ್ಲೇ ಉದ್ದೇಶಿತ ಯೋಜನೆಗೆ 200 ಮೀಟರ್ ರನ್ನಿಂಗ್ ಟ್ರ್ಯಾಕ್ (8 ಲೈನ್), ಫುಟ್ಬಾಲ್, ವಾಲಿಬಾಲ್, ಖೋಖೋ, ಬ್ಯಾಸ್ಕೆಟ್ಟ್ಬಾಲ್, ಥ್ರೋಬಾಲ್, ಕಬಡ್ಡಿ, ಲಾಂಗ್ಜಂಪ್, ಹೈಜಂಪ್, ಫಿಟ್ ಆಟೋಟಗಳ ಕೋರ್ಟ್ಗಳನ್ನು ನಿರ್ಮಿಸಿಲ್ಲ ಹಾಗೂ ಪಾರ್ಕಿಂಗ್ಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ.
ಇಷ್ಟೆಲ್ಲಾ ಕಳಪೆ ಕಾಮಗಾರಿ ಮಾಡಲಾಗಿದ್ದರೂ 13 ಲಕ್ಷಕ್ಕೂ ಕಡಿಮೆ ಹಣ ಗುತ್ತಿಗೆದಾರನಿಗೆ ನೀಡಿದರೆ ಆತ ಯಾವ ರೀತಿ ಕಾರ್ಯ ನಿರ್ವಹಿಸಲು ಸಾಧ್ಯ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಏನಾದರೂ ಹಣದ ಕೊರತೆ ಕಾಡೀತೇ ಇಲ್ಲವೇ ಅವರಿಗೆ ಚರಂಡಿ ನಿರ್ಮಿಸಲು ಎಂಜಿನಿಯರ್ ನೀಲನಕ್ಷೆಯಲ್ಲಿ ಗುರುತಿಸಿರಲಿಲ್ಲವೇ. ಚರಂಡಿ ವ್ಯವಸ್ಥೆ ಇಲ್ಲದೆ ಕ್ರೀಡಾಂಗಣ ನಿರ್ಮಿಸಿದರೆ ಅದರಲ್ಲಿ ಹರಿಯುವ ಮಳೆ ನೀರು ಎಲ್ಲಿ ಹೋಗುತ್ತದೆ ಎಂಬುದು ಎಂಜಿನಿಯರ್ಗೆ ತಿಳಿದಿರಲಿಲ್ಲವೇ.
ಮಳೆ ನೀರು ಒಂದು ದಿಕ್ಕಿನಲ್ಲಿ ಹರಿದು ಕ್ರೀಡಾಂಗಣದಲ್ಲಿ ಹಾಕಲಾಗಿರುವ ಮಣ್ಣು ಕೊಚ್ಚಿ ಹೋಗುತ್ತದೆ ಎಂಬ ಪರಿಜ್ಞಾನ ಅವರಿಗಿಲ್ಲವೇ ಅಥವಾ ಉದ್ದೇಶಪೂರ್ವಕವಾಗಿಯೇ ಚರಂಡಿ ನಿರ್ಮಿಸಿಲ್ಲವೇ ಎಂಬುದನ್ನು ಸಾರ್ವಜನಿಕರಿಗೆ ಎಂಜಿನಿಯರ್ ಅವರೇ ತಿಳಿಸಬೇಕಿದೆ.
ಹಣದ ಕೊರತೆ ಇದ್ದರೆ ಮುಖ್ಯವಾಗಿ ಆಗಬೇಕಾದ ಚರಂಡಿ ವ್ಯವಸ್ಥೆ ಕಲ್ಪಿಸಿ ಮೇಲ್ದರ್ಜೆಗೇರಿಸಲು ಅನುದಾನ ಬಂದಾಗ ಬಿರುಕು ಬಿಟ್ಟು ಹಾಳಾಗುತ್ತಿರುವ ಗ್ಯಾಲರಿಯನ್ನು ನಂತರ ನಿರ್ಮಿಸಬಹುದಾಗಿತ್ತು. ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಬೇಜವಾಬ್ದಾರಿತನದಿಂದ ಕ್ರೀಡಾಂಗಣ ನಿರ್ಮಿಸಿ ಸಾರ್ವಜನಿಕರ ಹಣ ಪೋಲು ಮಾಡುತ್ತಿರುವುದಕ್ಕೆ ಎಂಜಿನಿಯರ್ ಅವರೇ ನೇರ ಹೊಣೆಗಾರರು..
ಕನಿಷ್ಠ ಕ್ರೀಡಾಂಗಣಕ್ಕೆ ಯಾವ ಮಣ್ಣು ಹಾಕಬೇಕು ಎಂಬುದು ತಿಳಿಯದ ಇವರು ಕ್ರೀಡಾಂಗಣ ಕಾಮಗಾರಿ ಕಳಪೆಯಾಗಿದ್ದರೂ ಏಕೆ ಉತ್ತಮವಾಗಿದೆ ಎಂದು ಒಪ್ಪಿಕೊಂಡರು. ಇದಕ್ಕೆಲ್ಲಾ ಉತ್ತರ ದೊರೆಯ ಬೇಕಾದರೆ ಉನ್ನತ ಮಟ್ಟದ ತನಿಖೆ ನಡೆಸಬೇಕಾಗಿದೆ ಎಂಬುದು ಸಾರ್ವಜನಿಕರ ಹಾಗೂ ಕ್ರೀಡಾಪಟುಗಳ ಆಗ್ರಹವಾಗಿದೆ.
ಗ್ಯಾಲರಿಯಲ್ಲಿ ಅಂದರ್ ಬಾಹರ್: ಕ್ರೀಡಾಂಗಣದ ಕಾಮಗಾರಿಯ ಕಥೆ ಇಂತಾದರೇ, ಇನ್ನು ಕ್ರೀಡಾಂಗಣದಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದ ಕಾರಣ ಕುಡುಕರು, ಜೂಜುಕೋರರು, ಅನೈತಿಕ ಚಟುವಟಿಕೆ ನಡೆಸುವವರ ಪಾಲಿಗೆ ಇದು ಸ್ವರ್ಗವಾಗಿ ಪರಿಣಮಿಸಿದೆ. ಕ್ರೀಡಾಂಗಣದ ಗ್ಯಾಲರಿಯಲ್ಲಿ ಅಂದರ್ ಬಾಹರ್ ಸೇರಿದಂತೆ ನಾನಾ ರೀತಿಯ ಜೂಜುಗಳು ನಡೆಯುತ್ತಿದ್ದು, ಇದೊಂದು ರೀತಿಯಲ್ಲಿ ಜೂಜು ನಡೆಸುವ ಒಳಾಂಗಣ ಕ್ರೀಡಾಂಗಣವಾಗಿ ಮಾರ್ಪಟ್ಟಿದೆ.
ಜೂಜು ಇದ್ದೆಡೆ ಮದ್ಯಪಾನ ಇಲ್ಲವೆಂದರೆ ಏನು ಮಜಾ. ಹಾಗಾಗಿ ಇಲ್ಲಿನ ನಿತ್ಯ ಮದ್ಯಗೋಷ್ಠಿಗಳು ನಡೆಯುತ್ತಿವೆ. ಕುಡಿದ ಅಮಲಿನಲ್ಲಿ ಕ್ರೀಡಾಂಗಣದೊಳಗೆ ಬಾಟಲಿಗಳನ್ನು ಒಡೆಯುವ ಇವರು ಇದು ಸಾಲದು ಎಂಬಂತೆ ಕ್ರೀಡಾಂಗಣದ ಕೊಠಡಿಗಳ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.
ಅಲ್ಲದೆ ಇಲ್ಲಿ ವೇಶ್ಯಾವಾಟಿಕೆ ಕೂಡಾ ನಡೆಯುತ್ತಿದ್ದು, ಇವರ ಹಾವಳಿಯಿಂದಾಗಿ ಸಭ್ಯರು ಇಲ್ಲಿ ಬರಲು ಹೆದರುವಂತಾಗಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಯುವಜನ ಕ್ರೀಡಾ ಇಲಾಖೆ ಅಧಿಕಾರಿಗಳೇಕೆ ಕಣ್ಮುಚ್ಚಿ ಕುಳಿತಿದ್ದಾರೋ ತಿಳಿಯದಾಗಿದೆ.
ಕ್ರೀಡಾಂಗಣ ನಿರ್ವಹಣೆ ಯಾರ ಹೊಣೆ, ಏನಾದರೂ ಸ್ವತ: ಕ್ರೀಡಾಂಗಣವೇ ತನ್ನ ನಿರ್ವಹಣೆ ಮಾಡಿಕೊಳ್ಳುತ್ತದೆ ಎಂದು ಇವರು ಭಾವಿಸಿದ್ದಾರೆಯೇ ಎಂಬುದನ್ನು ಅವರೇ ಹೇಳಬೇಕಿದೆ.
ಇಲ್ಲದಿದ್ದರೆ ಕ್ರೀಡಾ ಪ್ರೇಮಿಗಳು ರೊಚ್ಚಿಗೆದ್ದು ಪ್ರತಿಭಟನೆ ಕೈಗೊಳ್ಳುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಕ್ರೀಡಾಂಗಣದಲ್ಲಿ ಜಿಮ್, ನೀರಿನ ವ್ಯವಸ್ಥೆ, ತರಬೇತುದಾರರನ್ನು ನಿಯೋಜಿಸಿ ಕ್ರೀಡಾಂಗಣಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಕ್ರೀಡಾಂಗಣವನ್ನು ಉಳಿಸಬೇಕಿದೆ.