ಶಾಸಕ ಕುಮಾರಸ್ವಾಮಿಯಿಂದ ಜನತೆಗೆ ದ್ರೋಹ: ಬಿ.ಆರ್. ಗುರುದೇವ್ ಆರೋಪ
ಕನ್ನಡಪ್ರಭ ವಾರ್ತೆ, ಹಾಸನ, ಏ.15
ಕಟ್ಟಾಯ ಹೋಬಳಿ ಅಭಿವೃದ್ಧಿಗೆ ಬಂದ ಅನುದಾನವನ್ನು ಹೊಳೆನರಸೀಪುರಕ್ಕೆ ವರ್ಗಾಯಿಸುತ್ತಿರುವ ಶಾಸಕ ಕುಮಾರಸ್ವಾಮಿ ಕ್ಷೇತ್ರ ಹಾಗೂ ಕಟ್ಟಾಯ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್. ಗುರುದೇವ್ ಗಂಭೀರ ಆರೋಪ ಮಾಡಿದರು.
ಕಟ್ಟಾಯ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರೇವಣ್ಣ ಕುತಂತ್ರದಿಂದ ಹಾಸನಕ್ಕೆ ಹತ್ತಿರದ ಕಟ್ಟಾಯ ಗ್ರಾಮವನ್ನು ಮೀಸಲು ಕ್ಷೇತ್ರಕ್ಕೆ ಸೇರಿಸುವ ಮೂಲಕ ಇಲ್ಲಿಗೆ ಬಂದ ಅನುದಾನವನ್ನು ಹೊಳೆನರಸೀಪುರದ ಅಭಿವೃದ್ಧಿಗೆ ಬಳಸುವ ಮೂಲಕ ದ್ರೋಹ ಬಗೆಯುತ್ತಿದ್ದಾರೆ. ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಕುಮಾರಸ್ವಾಮಿ ಒಬ್ಬ ಅಸಮರ್ಥ ಹಾಗೂ ದಲಿತ ವಿರೋಧಿ ಶಾಸಕ ಎಂದು ಆರೋಪಿಸಿದರು.
ಇಡೀ ಜಿಲ್ಲೆಯಲ್ಲಿ ಹೊಳೆನರಸೀಪುರದ ಮೂಲದವರನ್ನು ಶಾಸಕರನ್ನಾಗಿಸಿ ಜಿಲ್ಲೆಯನ್ನೇ ಗೌಡರ ಕುಟುಂಬದ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿರು. ದಲಿತರ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅತಿ ಹೆಚ್ಚು ಅನುದಾನ ಕೊಟ್ಟ ಕೀರ್ತಿ ಯಡಿಯೂರಪ್ಪ ಅವರಿಗೆ ಸೇರಿದ್ದು ಈ ಬಾರಿ ಮೀಸಲು ಕ್ಷೇತ್ರದಲ್ಲಿ ಕೆಜೆಪಿ ಜಯಬೇರಿ ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೆಜೆಪಿ ಅಭ್ಯರ್ಥಿ ಬೆಳಗೊಡು ಉಮೇಶ್ ಮಾತನಾಡಿ, ಕ್ಷೇತ್ರಕ್ಕೆ ಬಂದ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳದ ಕುಮಾರಸ್ವಾಮಿ ಒಬ್ಬ ಅಸಮರ್ಥ ರಾಜಕಾರಣಿ. ಗೊರೂರು ಮೀನುಗಾರರಿಗೆ ನ್ಯಾಯ ಕೊಡಿಸದೆ ವಂಚಿಸಿದ್ದಾರೆ. ಕಟ್ಟಾಯದಲ್ಲಿ ಕುಡಿವ ನೀರು, ವಿದ್ಯುತ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಕ್ಷೇತ್ರದ ಜನತೆಗೆ ಎಂದೂ ಸ್ಪಂದಿಸದ ಕುಮಾರಸ್ವಾಮಿ ಇಡೀ ಕ್ಷೇತ್ರದ ಅಭಿವೃದ್ಧಿ ವಿರೋಧಿಯಾಗಿದ್ದು ಈ ಬಾರಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕೆಜೆಪಿ ತಾ. ಅಧ್ಯಕ್ಷ ಎ.ಬಿ ನಾಗರಾಜ್, ದಲಿತಮುಖಂಡ ಹೆತ್ತೂರು ನಾಗರಾಜ್ ಎಪಿಎಂಸಿ ಪಾಪಣ್ಣ, ಮಲ್ಲೇಶ್, ಮಲ್ಲದೇವರಪುರ ಕಿರಣ್, ಮಹೇಶ್ ಇದ್ದರು.