ಸಕಲೇಶಪುರ ಕ್ಷೇತ್ರದಲ್ಲಿ 6 ಉಮೇದುವಾರಿಕೆ
ಸಕಲೇಶಪುರ: ವಿಧಾನಸಭಾ ಚುನಾವಣೆಗೆ ಸೋಮವಾರ ಒಟ್ಟು 6 ನಾಮಪತ್ರಗಳು ಸಲ್ಲಿಕೆಯಾದವು.
ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಕೆಜೆಪಿ ಅಭ್ಯರ್ಥ್ಥಿಯಾಗಿ ಬೆಳಗೋಡು ಉಮೇಶ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಮಲ್ಲೇಶ್, ಬಿಜೆಪಿ ಅಭ್ಯರ್ಥಿಯಾಗಿ ಡಾ.ನಾರಾಯಣಸ್ವಾಮಿ, ಜೆಡಿಯು, ಅಭ್ಯರ್ಥಿಯಾಗಿ ವೆಂಕಟೇಶ್, ಕೆಜೆಪಿ ಬಂಡಾಯ ಅಭ್ಯರ್ಥಿಯಾಗಿ ಮುಕಂದೂರು ತಿಮ್ಮಯ್ಯ ನಾಮಪತ್ರ ಸಲ್ಲಿಸಿದ ಪ್ರಮುಖರು.
ಬಹುತೇಕ ಎಲ್ಲಾ ಪಕ್ಷದ ಉಮೇದುವಾರರು ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ಉಪವಿಭಾಗಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿ ಎಚ್.ಕೆ ಕುಮಾರಸ್ವಾಮಿ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದನ್ನು ಬಿಟ್ಟರೆ ಬೇರೆಲ್ಲ ಅಭ್ಯರ್ಥಿಗಳು ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಬಂದು ನಾಮಪತ್ರ ಸಲ್ಲಿಸಿದರು. ಮೊದಲಿಗರಾಗಿ ಬಿಜೆಪಿ ಅಭ್ಯರ್ಥಿ, ಎರಡನೆಯವರಾಗಿ ಕೆಜೆಪಿ ಅಭ್ಯರ್ಥಿ, ಮೂರನೇಯವರಾಗಿ ಜೆಡಿಎಸ್ ಅಭ್ಯರ್ಥಿ ಹಾಗೂ ನಾಲ್ಕನೆಯವರಾಗಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರಸಲ್ಲಿಸಿದರು.