'ಸ್ಥಳೀಯ ಶಾಸಕರಿಗೆ ಬೇರೆಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ'
ಸಕಲೇಶಪುರ: ಶಾಸಕ ಎಚ್.ಕೆ.ಕುಮಾರಸ್ವಾಮಿಗೆ ಹಿರಿಯ ಮಾಜಿ ಶಾಸಕರ ಬಗ್ಗೆ ಟೀಕೆ ಮಾಡುವ ನೈತಿಕತೆ ಇಲ್ಲ. ಏಕವಚನ ಬಳಸಿ ಆಡಿದ ದುರಹಂಕಾರದ ಮಾತುಗಳನ್ನು ಬಿಜೆಪಿ ಖಂಡಿಸುತ್ತದೆ ಎಂದು ಪಕ್ಷದ ವಕ್ತಾರ ಡಿ.ರಾಜ್ಕುಮಾರ್ ಹೇಳಿದರು.
ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ, ಹಾಲಿ ವಿಧಾನ ಪರಿಷತ್ ಸದಸ್ಯ ಬಿ.ಬಿ.ಶಿವಪ್ಪನವರ ಕುರಿತು ಜನ ಮಾತನಾಡುವಾಗ ಶಿವಪ್ಪಾಜೀ ಎನ್ನುತ್ತಾರೆ. ಅದೇ ಕುಮಾರಸ್ವಾಮಿ ಬಗ್ಗೆ ಅಸಮರ್ಥ ಎಂಬ ಪದ ಹಾಗೂ ಏಕವಚನ ಬಳಸುತ್ತಾರೆ ಎಂದು ತಿಳಿಸಿದರು. ಹಿರಿಯ ಶಾಸಕರು ಏನೂ ಮಾಡಿಲ್ಲ ಎಂದು ಹೇಳುವುದು ಅರ್ಥಹೀನ. ಶಿವಪ್ಪನವರ ಸಾಧನೆ ಜನರು ಅವರಿಗೆ ನೀಡುವ ಗೌರವಕ್ಕೆ ಕಾರಣವಾಗಿದೆ. ಅಯೋಗ್ಯ, ಅಸಮರ್ಥ ಎಂದು ಇವರನ್ನು ಜನ ಏಕೆ ಕರೆಯುತ್ತಾರೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಹೇಳಿದರು.