ಜಿಲ್ಲಾ ಮಾಧ್ಯಮ ಕಣ್ಗಾವಲು ಸಮಿತಿ ರಚನೆ
ಹಾಸನ: ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಚುನಾವಣಾ ಜಾಹಿರಾತುಗಳ ಪ್ರಮಾಣೀಕರಣ ಹಾಗೂ ಇತರೆ ಮಾಧ್ಯಮ ಸಂಬಂಧದ ಕರ್ತವ್ಯ ನಿರ್ವಹಣೆಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ರಚಿಸಲಾಗಿದೆ.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತುಗಳನ್ನು ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕು.
ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ ಈ ಸಮಿತಿ ರಚಿಸಲಾಗಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳು, ಸುದ್ಧಿ ರೂಪದ ಜಾಹೀರಾತುಗಳು ಚುನಾವಣಾ ಪ್ರಚಾರ ಸಾಮಗ್ರಿಗಳ ಬಗ್ಗೆ ನಿಗಾ ವಹಿಸಿ ಆಯಾ ಕ್ಷೇತ್ರದ ಚುನಾವಣಾಧಿಕಾರಿಗೆ ಹಾಗೂ ವೆಚ್ಚ ವೀಕ್ಷಕರಿಗೆ ದಿನವಹಿ ವರದಿ ಸಮಿತಿ ನೀಡುವುದು.
ಜಿಲ್ಲಾ ಸಮಿತಿ ಅನುಮೋದನೆ: ದೂರದರ್ಶನ, ರೇಡಿಯೋ, ಕೇಬಲ್ ಟೆಲಿವಿಷನ್ ಮುಂತಾದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಜಿಲ್ಲಾ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಬೇಕು ಸಮಿತಿಯ ವಾರ್ತಾಭವನದಲ್ಲಿ ಕಾರ್ಯನಿರ್ವಹಿಸಲಿದ್ದು ನಿಗದಿತ ನಮೂನೆಗಳನ್ನು ಪಡೆದುಕೊಂಡು ಪ್ರಮಾಣೀಕರಣಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಅನುಮೋದನೆ ಪಡೆಯದೇ ಜಾಹಿರಾತು ಪ್ರಸಾರವಾದಲ್ಲಿ ಮಾಧ್ಯಮ ನಿಗಾ ಸಮಿತಿಯು ಈ ಬಗ್ಗೆ ಗಮನಹರಿಸುವುದು ಹಾಗೂ ಅಗತ್ಯ ಕ್ರಮಕ್ಕಾಗಿ ಚುನಾವಣಾಧಿಕಾರಿಗಳಿಗೆ ಕಳುಹಿಸುವುದು.
ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹಿರಾತುಗಳಿಗೆ ಅನುಮೋದನೆ ಅಗತ್ಯವಿರುವುದಿಲ್ಲ. ಆದರೆ ಪ್ರಕಟವಾಗುವ ಎಲ್ಲ ಜಾಹೀರಾತುಗಳನ್ನು ಸಮಿತಿಯು ಗಮನಿಸಿ ಅಭ್ಯರ್ಥಿಗಳ ವೆಚ್ಚದ ಲೆಕ್ಕಕ್ಕೆ ತೋರಿಸಲು ವೆಚ್ಚ ವೀಕ್ಷಕರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡುವುದು.
ಕರಪತ್ರ, ಭಿತ್ತಿಪತ್ರ ಹಾಗೂ ಈ ರೀತಿಯ ಇತರೆ ಚುನಾವಣಾ ಸಾಮಗ್ರಿಗಳಲ್ಲಿ ಪ್ರಕಾಶಕರ ಹಾಗೂ ಮುದ್ರಕರ ಹೆಸರು, ವಿಳಾಸ ಮುದ್ರಿಸುವುದು ಕಡ್ಡಾಯವಾಗಿದ್ದು, ಮುದ್ರಕರು ಹಾಗೂ ಪ್ರಕಾಶಕರು ಈ ಕುರಿತ ಘೋಷಣಾ ಪತ್ರವನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸ ಬೇಕಾಗಿರುತ್ತದೆ.
ಯಾವುದೇ ಚುನಾವಣಾ ಸಾಮಗ್ರಿಗಳ ಮೇಲೆ ಮುದ್ರಕರ ಹಾಗೂ ಪ್ರಕಾಶಕರ ವಿವರ ಇಲ್ಲದಿದ್ದಲ್ಲಿ ಅಂತಹುಗಳ ವಿವರಗಳನ್ನು ಚುನಾವಣಾ ಅಧಿಕಾರಿಗಳಿಗೆ ಸಮಿತಿ ಕಳುಹಿಸಿ ಕೊಡಬೇಕಾಗಿದೆ.
ಅಭ್ಯರ್ಥಿಯ ಗಮನಕ್ಕೆ ತಾರದೆ ಬೇರೆಯವರು ಅಭ್ಯರ್ಥಿಯ ಹೆಸರಿನಲ್ಲಿ ಜಾಹಿರಾತು ಹಾಗೂ ಚುನಾವಣಾ ಸಾಮಗ್ರಿ ಮುದ್ರಿಸುವಂತಿಲ್ಲ ಇಂಥವುದು ಕಂಡುಬಂದಲ್ಲಿ ಈ ರೀತಿ ಪ್ರಕಟಿಸಿದವರ ವಿರುದ್ಧವೂ ಕ್ರಮ ವಹಿಸಲಾಗುತ್ತದೆ.
ಸುದ್ದಿ ರೂಪದ ಜಾಹಿರಾತು: ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ರೂಪದ ಜಾಹಿರಾತುಗಳ ಬಗ್ಗೆಯೂ ಸಮಿತಿ ಗಮನಹರಿಸಲಿದೆ. ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುವ ಈ ಪ್ರಕರಣಗಳನ್ನು ವಾರ್ತಾ ಇಲಾಖೆ ಜಾಹಿರಾತು ದರ ಅನ್ವಯಿಸಿ ಅಥವಾ ಆಯಾ ಮಾಧ್ಯದ ಜಾಹೀರಾತು ದರ ಅನ್ವಯಿಸಿ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುತ್ತದೆ.
ಜಾಹೀರಾತು ಹಾಗೂ ಕಾಸಿಗಾಗಿ ಸುದ್ಧಿ ಕುರಿತಂತೆ ದರ ನಿಗದಿಪಡಿಸಲು ಆಯಾ ಪತ್ರಿಕೆ ಹಾಗು ವಿದ್ಯುನ್ಮಾನ ಮಾಧ್ಯಮಗಳ ದರಪಟ್ಟಿಯನ್ನು ಸಂಸ್ಥೆಗಳಿಂದ ಪಡೆದುಕೊಳ್ಳಲಾಗುವುದು ಹಾಗೂ ವಾರ್ತಾ ಇಲಾಖಾ ದರಗಳನ್ನು ವಾರ್ತಾ ಇಲಾಖೆಯಿಂದ ಪಡೆದುಕೊಳ್ಳಲಾಗುವುದು. ವಾರ್ತಾಭವನದಲ್ಲಿ ಸಮಿತಿಯು ಕಾರ್ಯನಿರ್ವಹಿಸುವುದು. ಎಂದು ಎಂಸಿಎಂಸಿ ಸದಸ್ಯ ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿನೋದ್ಚಂದ್ರ ತಿಳಿಸಿದ್ದಾರೆ.