ವಿಂದ್ಯಗಿರಿಯಲ್ಲಿ ಬಾಹುಬಾಲಿಗೆ ಮಹಾಪೂಜೆ
ಕನ್ನಡಪ್ರಭ ವಾರ್ತೆ ಶ್ರವಣಬೆಳಗೊಳ ಏ.16
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ವಿಂದ್ಯಗಿರಿಯಲ್ಲಿ ವಿರಾಜಮಾನವಾಗಿರುವ ಭಗವಾನ್ ಬಾಹುಬಲಿ ಸ್ವಾಮಿಯ 1033 ನೇ ಪ್ರತಿಷ್ಠಾಪನಾ ದಿವಸದ ಪ್ರಯುಕ್ತ ಸೋಮವಾರ ಬೆಳಗ್ಗೆ ವಿಶೇಷ ಮಹಾಪೂಜೆ, ಆದ್ಯ ಭಟ್ಟಾರಕ ಪಟ್ಟಾಚಾರ್ಯರ ಸಿಂಹಾಸನ ಪೂಜೆ ಮತ್ತು ಇತರೆ ಪೂಜಾ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನೆರವೇರಿತು.
ನಾನಾ ಬಗೆಯ ಫಲ, ಪುಷ್ಪ, ಪೂಜಾ ಸಾಮಗ್ರಿಗಳೊಂದಿಗೆ ಪೂಜಾ ಕಾರ್ಯ ವಿಜೃಂಭಣೆಯಿಂದ ಜರುಗಿತು.
ಪ.ಪೂ.ಉಪಾಧ್ಯಾಯಶ್ರೀ 108 ನಿಜಾನಂದ ಸಾಗರ, ಆರ್ಯಿಕಾಶ್ರೀ 105 ಶಿವಮತಿ ಮಾತಾಜಿ, ಪೂಜ್ಯ ಆರ್ಯಿಕಾಶ್ರೀ 105 ಪ್ರಸನ್ನಮತಿ ಮಾತಾಜಿ ಸಾನಿಧ್ಯ ಹಾಗೂ ಜಗದ್ಗುರು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಹಾಗೂ ಸಿದ್ಧಾಂತಕೀರ್ತಿ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಿದವು. ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥೋತ್ಸವದಲ್ಲಿ ಬಾಹುಬಲಿ ಸ್ವಾಮಿ ಉತ್ಸವ ನೆರವೇರಿತು.