ಕಡೆ ದಿನ ಬರೋಬ್ಬರಿ 20 ನಾಮಪತ್ರ
ಕ.ಪ್ರ.ವಾರ್ತೆ , ಹಾಸನ , ಏ.17
ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆ ದಿನವಾದ್ದರಿಂದ ನಾಮಪತ್ರಗಳ ಸುರಿಮಳೆಯಾಗಿದ್ದು, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟಾರೆಯಾಗಿ 20 ನಾಮಪತ್ರಗಳು ಸಲ್ಲಿಕೆಯಾಗಿವೆ.
ಜೆಡಿಎಸ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಭಾರತೀಯ ಪ್ರಜಾ ಪಕ್ಷ, ಬಿಎಸ್ಆರ್ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರು ಅಭ್ಯರ್ಥಿಗಳು ಸೇರಿದಂತೆ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ 9 ನಾಮಪತ್ರಗಳು ಸಲ್ಲಿಕೆಯಾದವು. ಒಟ್ಟಾರೆಯಾಗಿ ಹಾಸನ ವಿಧಾನಸಭಾ ಕ್ಷೇತ್ರದಿಂದ 16 ಮಂದಿಯಿಂದ 20 ನಾಮಪತ್ರಗಳು ಸಲ್ಲಿಕೆಯಾಗಿದ್ದು, 6 ಮಂದಿಯಿಂದ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ.
ಅಂತೂ ನಾಮಪತ್ರ ಸಲ್ಲಿಸಿದ ಪ್ರಕಾಶ್: ಅಂತೂ ಇಂತೂ ಬಿ ಫಾರಂ ಪಡೆದ ಹಾಲಿ ಶಾಸಕ ಎಚ್.ಎಸ್. ಪ್ರಕಾಶ್ ಅವರು ಜೆಡಿಎಸ್ನಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಅವರು ನಗರದ ಹಾಸನಾಂಬ, ನೀರುಬಾಗಿಲು ಆಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆಯನ್ನು ಸಲ್ಲಿಸಿದರು. ನಂತಹ ಅವರು ನಗರದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಚಿದಾನಂದ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
ನಂತರ ಸಾವಿವಾರು ಕಾರ್ಯಕರ್ತರೊಂದಿಗೆ ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಮಹಾವೀರ ವೃತ್ತ, ಸಂತೆಪೇಟೆ ರಸ್ತೆಯ ಮೂಲಕ ಬಿ.ಎಂ.ರಸ್ತೆಗೆ ಬಂದು, ನಂತರ ಹಾಸನಾಂಬ ದೇವಾಲಯದ ಮುಂಭಾಗ ಹಾದು ಹೋಗಿ ಹಳೇ ಬಸ್ ನಿಲ್ದಾಣದ ಮೂಲಕ ಹೇಮಾವತಿ ಪ್ರತಿಮೆಗೆ ಬಂದು ಮೆರವಣಿಗೆಯನ್ನು ಮುಕ್ತಾಯಗೊಳಿಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಎಚ್.ಎಸ್.ಪ್ರಕಾಶ್ ಅವರಿಗೆ ಮತ ಹಾಕಬೇಕು. ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವುದು ಖಂಡನೀಯ. ಪ್ರಕಾಶ್ ಅವರು ಜೆಡಿಎಸ್ನ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಎಸ್. ದ್ಯಾವೇಗೌಡ, ಸತ್ಯನಾರಾಯಣ, ನಗರಸಭಾ ಸದಸ್ಯ ಎಚ್.ಎಸ್.ಅನಿಲ್ಕುಮಾರ್, ಪ್ರಸನ್ನಕುಮಾರ್, ಜೆಡಿಎಸ್ ಮುಖಂಡರಾದ ಚನ್ನವೀರಪ್ಪ, ಎಂ.ಜಿ.ದೊಡ್ಡೇಗೌಡ, ಮಾಜಿ ನಗರಸಭಾ ಅಧ್ಯಕ್ಷ ಸಿ.ಆರ್.ಶಂಕರ್, ಸೈಯದ್ ಅಕ್ಬರ್, ಮೊದಲಾದವರು ಇದ್ದರು.
ಕೋಡಿಹಳ್ಳಿ ನಾಮಪತ್ರ: ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ರೈತರು ಕೋಡಿಹಳ್ಳಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಕಳೆದ 5 ವರ್ಷಗಳ ಬಿಜೆಪಿ ಸರ್ಕಾರ ಅಡಳಿತದಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಅವರಿಗೆ ಬದಲಾವಣೆಯ ಅವಶ್ಯಕತೆ ಇದ್ದು, ನಾನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಭ್ಯರ್ಥಿಯಾಗಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿರುವುದಾಗಿ ತಿಳಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಬಂಗಾರಿ ಮಂಜು ಅವರು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಅವರ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಗರದ ಶಂಕರೀಮಠ ರಸ್ತೆಯ ಮೂಲಕ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತೆರಳಿ ಚುನಾವಣಾಧಿಕಾರಿ ಚಿದಾನಂದ್ ಅವರಿಗೆ ನಾಮಪತ್ರ ಸಲ್ಲಿಸಿದರು. ಹಾಗೆಯೇ ಬಿಎಸ್ಆರ್ ಕಾಂಗ್ರೆಸ್ನಿಂದ ಎ.ಪಿ.ಅಹಮ್ಮದ್ ಅವರು ಹಾಸನ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಅವರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಾಮಪತ್ರವನ್ನು ಸಲ್ಲಿಸಿದರು. ಇದೇ ಬಿಎಸ್ಆರ್ ಕಾಂಗ್ರೆಸ್ನಿಂದ ಸಲಂ ಖಾನ್ ಅವರೂ ನಾಮಪತ್ರವನ್ನು ಸಲ್ಲಿಸಿದ್ದಾರೆ. ಭಾರತೀಯ ಪ್ರಜಾ ಪಕ್ಷದಿಂದ ಆರ್.ಜಿ.ಸುರೇಶ್ ಅವರು ಸಹ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿಯಿಂದ ಎಂ.ಬಿ.ಗುರುಪ್ರಸಾದ್ ಅವರು ಮತ್ತೊಂದು ನಾಮಪತ್ರ ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಗಳಾಗಿ ರವಿಕಾಂತೇಗೌಡ, ಯು.ಆರ್.ಸಂತೋಷ್ ಅವರು ಸೇರಿದಂತೆ ಒಟ್ಟಾರೆಯಾಗಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ 20 ನಾಮಪತ್ರಗಳು ಸಲ್ಲಿಯಾಗಿದ್ದು, 16 ಮಂದಿ ಕಣದಲ್ಲಿ ಇದ್ದಾರೆ.