ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಂಗ್ರೆಸ್ ಮುಖಂಡರನ್ನು ಚಿಂತೆಗೆ ತಳ್ಳಿದ ಜಯಣ್ಣ ಸ್ಪರ್ಧೆ

Vishwanath S
Updated On : 17 Apr 2013, 9:36 am

ಕ.ಪ್ರ.ವಾರ್ತೆ  ,   ಅರಸೀಕೆರೆ  ,  ಏ.17
ಹಿಂದುಳಿದ ವರ್ಗಗಳ ಮುಖಂಡ ಉದ್ಯಮಿ ಜೆ.ಪಿ. ಜಯಣ್ಣ ಅವರು ಸ್ಪರ್ಧೆಗೆ ಇಳಿದಿರುವುದು ಕಾಂಗ್ರೆಸ್‌ಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದು ಜಿಲ್ಲಾ ಕಾಂಗ್ರೆಸ್ ಮುಖಂಡರನ್ನು ಚಿಂತೆಗೀಡು ಮಾಡಿದೆ.
ಕಳೆದ ಪುರಸಭೆ ಚುನಾವಣೆಯಲ್ಲಿ ಹೀನಾಯ ಸ್ಥಿತಿಯಲ್ಲಿದ್ದ ಪಕ್ಷಕ್ಕೆ ಚೈತನ್ಯ ನೀಡಿ ತಮ್ಮದೇ ವರ್ಚಸ್ಸಿನಿಂದ 11 ಸ್ಥಾನಗಳನ್ನು ಗಳಿಸಲು ಕಾರಣರಾಗುವ ಮೂಲಕ ಜಯಣ್ಣ ಕಾಂಗ್ರೆಸ್‌ಗೆ ಜೀವ ತುಂಬುವ ಕಾರ್ಯ ಮಾಡಿದ್ದರು. ಆದರೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗದ ಮುಖಂಡರೊಬ್ಬರಿಗೆ ಅಥವಾ ವೀರಶೈವರಿಗೆ ಟಿಕೆಟ್ ನೀಡುವುದಾಗಿ ನಂಬಿಸಿ ಕೊನೆ ಗಳಿಗೆಯಲ್ಲಿ ಕೈ ಕೊಟ್ಟಿರುವುದು ಪಕ್ಷದ ಹಿನ್ನಡೆಗೆ ಕಾರಣವಾಗಲಿದೆ ಎಂಬುದು ರಾಜಕೀಯ ಅಂಗಳದಲ್ಲಿ ಚರ್ಚೆಯ ವಸ್ತುವಾಗಿದೆ. ಕಳೆದ 2 ದಶಕಗಳಿಂದಲೂ ಯಾವುದೇ ರಾಜಕೀಯ ಫಲಾಪೇಕ್ಷೆಯಿಲ್ಲದೆ ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಜಾತಿ ಮತ ಭೇದವಿಲ್ಲದೆ ಚರ್ಚ್, ಮಸೀದಿ, ದೇವಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ವ್ಯಕ್ತಿಯೊಬ್ಬರಿಗೆ ಕಾಂಗ್ರೆಸ್ ಟಿಕೆಟ್ ನೀಡದೇ ಇರುವುದು ಬಂಡಾಯದ ಸ್ಫೋಟಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಸ್ಥಳೀಯರಿಗೆ ಟಿಕೆಟ್ ನೀಡದೇ ಹೊರಗಿನ ವ್ಯಕ್ತಿಗೆ ಟಿಕೆಟ್ ನೀಡಿರುವುದು ಸರಿಯಲ್ಲ. ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸೋತ ಕಾಂಗ್ರೆಸ್ ಮುಖಂಡರಿಗೆ ಅರಸೀಕೆರೆ ಕ್ಷೇತ್ರದಿಂದ ಟಿಕೆಟ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಎಷ್ಟು ಸರಿ ಎಂದು ಪ್ರಶ್ನಿಸಲಾಗುತ್ತಿದೆ. ಪ್ರಭಾವಿ ಕೈಯೊಂದು ಸ್ಥಳೀಯವಾಗಿ ಹತ್ತಾರು ವರ್ಷಗಳಿಂದ ತಮ್ಮ ಮನೆ ಹಣ ವೆಚ್ಚ ಮಾಡಿಕೊಂಡು ಪಕ್ಷಕ್ಕೆ ತ್ಯಾಗ ಮಾಡಿರುವ ಜಯಣ್ಣ ಅವರಿಗೆ ಟಿಕೆಟ್ ತಪ್ಪಿಸಿರುವುದು ಇಂದಿನ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಕನ್ನಡಿಯಾಗಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ.
ಸ್ವಾತಂತ್ರ್ಯ ಬಂದಾಗಿನಿಂದಲೂ ವೀರಶೈವರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಹಲವು ಬಾರಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಆದರೆ ಈ ಬಾರಿ ಸಾಮಾಜಿಕ ನ್ಯಾಯಕ್ಕೆ ತಿಲಾಂಜಲಿ ನೀಡಿರುವ ಕಾಂಗ್ರೆಸ್ ಬಹುಸಂಖ್ಯಾತರಾಗಿರುವ ಹಿಂದುಳಿದ ವರ್ಗ ಹಾಗೂ ವೀರಶೈವರನ್ನು ಕಡೆಗಣಿಸಿರುವ ಮೂಲಕ ಅವರ ಕೋಪಕ್ಕೆ ತುತ್ತಾಗುವುದರ ಲ್ಲಿ ಯಾವುದೇ ಸಂಶಯವಿಲ್ಲ ಎನ್ನುವ ಮಾತುಗಳು ಮತದಾರರ ವಲಯದಲ್ಲಿ  ಕೇಳಲಾರಂಭಿಸಿದೆ.

-ಪಿ. ಶಾಂತಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement