ಬೇಲೂರಲ್ಲಿ ಜೆಡಿಎಸ್‌ನಿಂದ ಲಿಂಗೇಶ್ ಅಧಿಕೃತ, ಮಂಜುನಾಥ್ ಬಂಡಾಯ ಉಮೇದುವಾರಿಕೆ
ಕ.ಪ್ರ.ವಾರ್ತೆ , ಬೇಲೂರು , ಏ.17
ತಾಲೂಕು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ನಾನಾ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ವಿಶೇಷವಾಗಿ ಜೆಡಿಎಸ್‌ನಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದು ಜೆಡಿಎಸ್ ವರಿಷ್ಠರು ಕೆ.ಎಸ್. ಲಿಂಗೇಶ್ ಅವರಿಗೆ ಬಿ ಫಾರಂ ನೀಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಜೆಡಿಎಸ್ ತಡವಾಗಿ ಅಳೆದು ಸುರಿದು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೂ ಈಗ ಬಂಡಾಯದ ಬಿಸಿ ಎದುರಿಸಬೇಕಾದ ಸ್ಥಿತಿಯಲ್ಲಿದೆ. ಎಲ್ಲಾ ಪಕ್ಷಗಳು ಈ ಹಿಂದೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರೂ ಜೆಡಿಎಸ್ ಮಾತ್ರ ಮೀನಮೇಷ ಎಣಿಸುತ್ತಲೇ ಇತ್ತು. ಎಚ್.ಕೆ.ಜವರೇಗೌಡರು, ಬಿ.ಸಿ ಮಂಜುನಾಥ್, ಕೆ.ಎಸ್. ಲಿಂಗೇಶ್ 3 ಮಂದಿ ಆಕಾಂಕ್ಷಿಗಳಿದ್ದು ತೀವ್ರ ಪೈಪೋಟಿ ಎದುರಾಗಿತ್ತು. ಮಂಗಳವಾರ ರಾತ್ರಿವರೆಗೂ ಗಾಳಿ ಸುದ್ದಿಯಿಂದಾಗಿ ಕಾರ್ಯಕರ್ತರಿಗೆ ಗೊಂದಲ ಉಂಟಾಗಿತ್ತು. ಆದರೆ ಕೊನೆಗೆ ವೀರಶೈವ ಸಮುದಾಯಕ್ಕೆ ಸೇರಿದ ಕೆ.ಎಸ್. ಲಿಂಗೇಶ್ ಅವರಿಗೆ ಜೆಡಿಎಸ್ ಹಸಿರು ನಿಶಾನೆ ತೋರಿದೆ.
ಜೆಡಿಎಸ್ ವರಿಷ್ಠರ ತೀರ್ಮಾನಕ್ಕೆ ಬೇಸರ ವ್ಯಕ್ತಪಡಿಸಿರುವ ಬಂಡಾಯ ಜೆಡಿಎಸ್ ಅಭ್ಯರ್ಥಿ ಬಿ.ಸಿ.ಮಂಜುನಾಥ್ ಬುಧವಾರ ಮಧ್ಯಾಹ್ನದವರೆಗೂ ತಮಗೆ ಬಿ ಫಾರಂ ಎಂದು ವರಿಷ್ಠರು ನಂಬಿಸಿ ಕೊನೆ ಗಳಿಗೆಯಲ್ಲಿ ಲಿಂಗೇಶ್ ಅವರಿಗೆ ನೀಡಿದ್ದಾರೆ. ಇದು ತಮಗೆ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.