ಮುನಿಸಿಕೊಂಡಿದ್ದ ಮೂಲ ಕಾಂಗ್ರೆಸ್ಸಿಗರಿಂದಲೂ ಪುಟ್ಟೇಗೌಡರಿಗೆ ಬೆಂಬಲ
ಕ.ಪ್ರ.ವಾರ್ತೆ , ಚನ್ನರಾಯಪಟ್ಟಣ , ಏ.17
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಿಂದ ಸಿ.ಎಸ್. ಪುಟ್ಟೇಗೌಡ ಅವರಿಗೆ ಕಾಂಗ್ರೆಸ್ ಬಿ. ಫಾರಂ ನೀಡಿದ್ದನ್ನು ವಿರೋಧಿಸುತ್ತಿದ್ದ ಕ್ಷೇತ್ರದ ಮೂಲ ಕಾಂಗ್ರೆಸಿಗರೆಲ್ಲರೂ ಹೈಕಮಾಂಡ್ನ ಮನವೊಲಿಕೆಯಿಂದಾಗಿ ಒಟ್ಟಾಗಿ ಸೇರಿ ಪುಟ್ಟೇಗೌಡ ಅವರಿಗೆ ಬೆಂಬಲ ಸೂಚಿಸಿ ಅರ್ಜಿ ಸಲ್ಲಿಸಲು ಬುಧವಾರ ಸಹಕಾರಿಯಾದರು.
ಸಿ.ಎಸ್. ಪುಟ್ಟೇಗೌಡ ಅವರಿಗೆ ಬಿ. ಫಾರಂ ನೀಡಿದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಕಾಂಗ್ರೆಸ್ದಲ್ಲಿ ಎದ್ದಿದ್ದ ಭಿನ್ನಮತ ಶಮನಗೊಂಡಿದ್ದು, ಟಿಕೆಟ್ ಸಿಗದ ಾರಣ ಬೇಸತ್ತ ಹಿರೀಸಾವೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ ಕೆಜೆಪಿಯಿಂದ ಸೋಮವಾರ ಅರ್ಜಿ ಸಲ್ಲಿಸಿದ್ದರಾದರೂ ಅವರು ಮತ್ತೆ ಕಾಂಗ್ರೆಸ್ಗೆ ಮರಳಿ ಬೆಂಬಲ ಸೂಚಿಸಿದರು.
ಸಿ.ಎಸ್. ಪುಟ್ಟೇಗೌಡ ಅವರು ಕಳೆದ 6 ತಿಂಗಳಿಂದ ಕಾಂಗ್ರೆಸ್ಗೆ ಸೇರುವ ಸೂಚನೆಗಳಿದ್ದ ಕಾರಣ ಮೂಲ ಕಾಂಗ್ರೆಸಿಗರಿಗೆ ಟಿಕೆಟ್ ನೀಡಿದರೆ ಮೂಲ ಕಾಂಗ್ರೆಸಿಗರಲ್ಲೊಬ್ಬರು ಅಭ್ಯರ್ಥಿಯಾಗುತ್ತಾರೆ ಎಂದು ಹೇಳುತ್ತಾ ಬಂದಿದ್ದ ಗೋಪಾಲಸ್ವಾಮಿ ಕೆಜೆಪಿಯಿಂದ ಅರ್ಜಿ ಸಲ್ಲಿಸಿದ್ದು, ಕೊನೆ ಗಳಿಗೆಯಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ಸಿ.ಎಸ್. ಪುಟ್ಟೇಗೌಡ ಅವರ ಮನವೊಲಿಕೆಯಿಂದ ಎಲ್ಲರೂ ಒಟ್ಟಾಗಿ ಸೇರಿ ನಾಮಪತ್ರ ಸಲ್ಲಿಸಿದರು.
ಕೆಜಿಪಿಯಿಂದ ಅರ್ಜಿ ಸಲ್ಲಿಸಿದ್ದ ಗೋಪಾಲಸ್ವಾಮಿ ತಾವು ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಹೇಳುವ ಮುಖೇನ ಭಿನ್ನಮತಕ್ಕೆ ಇತಿಶ್ರೀ ಹಾಡಿದರು.
ಅದೇ ರೀತಿ ಮಾಜಿ ಸಚಿವ ಎಚ್.ಸಿ ಶ್ರೀಕಂಠಯ್ಯ ಪುತ್ರ ಎಚ್.ಎಸ್. ವಿಜಯ್ಕುಮಾರ್, ಚನ್ನರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎನ್. ಚಂದ್ರೇಗೌಡ, ಕೆಪಿಸಿಸಿ ಸದಸ್ಯರಾದ ಸಿ.ವಿ ರಾಜಪ್ಪ, ಕಬ್ಬಳಿ ರಂಗೇಗೌಡ ಅವರು ಪುಟ್ಟೇಗೌಡರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಒಂದೇ ವೇದಿಕೆ ಹಂಚಿಕೊಂಡು ತಮ್ಮಲ್ಲಿದ್ದ ಭಿನ್ನಮತ ಮರೆತರು.