ಸಕಲೇಶಪುರ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಹೊನ್ನಪ್ಪ
ಕ.ಪ್ರ.ವಾರ್ತೆ , ಸಕಲೇಶಪುರ , ಏ.17
ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಡಮ್ಮಿ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದನ್ನು ವಿರೋಧಿಸಿ, ಮೂಲ ನಿವಾಸಿಯನ್ನು ನಿಲ್ಲಿಸಿ ಚುನಾವಣೆ ಎದುರಿಸುವುದಾಗಿ ಆಲೂರು ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಹೊನ್ನಪ್ಪ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎಂದು 20ಕ್ಕೂ ಹೆಚ್ಚು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಒತ್ತಾಯಿಸಿದ್ದರು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಕೆಲ ಮುಖಂಡರು ಬೇರೆ ಪಕ್ಷದವರಿಗೆ ಬೆಂಬಲ ಕೊಡಲು ಕ್ಷೇತ್ರಕ್ಕೆ ಪರಿಚಯವೇ ಇಲ್ಲದ ಅಭ್ಯರ್ಥಿಯನ್ನು ಹಾಕಿದ್ದು ನಮ್ಮೆಲ್ಲರ ಮನಸ್ಸಿಗೆ ನೋವು ಉಂಟು ಮಾಡಿದೆ. ಆದ್ದರಿಂದ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದಾಗಿ ಎಂದರು. ಬಂಡಾಯ ಅಭ್ಯರ್ಥಿಗಳಾಗಿ ಸ್ಥಳೀಯ ಆಕಾಂಕ್ಷಿಗಳಾದ ದೊಡ್ಡೀರಯ್ಯ, ಬೆಳಗೋಡು ಹಾಗೂ ಕಟ್ಟಾಯ ರವಿಕುಮಾರ್ ಕಟ್ಟಾಯ ಅವರನ್ನು ಸರ್ವಾನುಮತದಿಂದ ಅಖಾಡಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು. ದೊಡ್ಡೀರಯ್ಯ ಮತ್ತು ರವಿಕುಮಾರ್ ಅವರಲ್ಲಿ ಒಬ್ಬರನ್ನು ಆರಿಸಿ ಬೆಂಬಲಿಸುವುದಾಗಿ ಪಕ್ಷದ ಎಲ್ಲ ವಂಚಿತ ಮುಖಂಡರು ಹಾಗೂ ಕಾರ್ಯಕರ್ತರು ತೀರ್ಮಾನಿಸಿದ್ದಾರೆ. ಯಾವ ಕಾರಣಕ್ಕು ಈ ನಿಲುವನ್ನು ಹಿಂದೆ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕುಮಾರಯ್ಯ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.