ಬಂಡಾಯ ಶಮನಕ್ಕೆ ಮುಖಂಡರ ಹರಸಾಹಸ
ಹಾಸನ: ಟೆಕೆಟ್ ಹಂಚಿಕೆ ವಿಚಾರದಲ್ಲಿ ಜಿಲ್ಲೆಯ ಪ್ರಮುಖ ಪಕ್ಷಗಳಲ್ಲಿ ಗೊಂದಲ ಏರ್ಪಟ್ಟ ಕಾರಣ ಟಿಕೆಟ್ ಸಿಗದೇ ನಿರಾಶಾರಾದವರು ಬಂಡಾಯ ಸ್ಪರ್ಧಿಸಲು ಮುಂದಾಗಿದ್ದಾರೆ. ಇದು ರಾಜಕೀಯ ಪಕ್ಷಗಳ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಬಂಡಾಯ ಸ್ಪರ್ಧಿಸಲು ಮುಂದಾಗಿರುವ ಅಭ್ಯರ್ಥಿಗಳಿಂದ ನಾಮಪತ್ರ ಹಿಂತೆಗೆಸಲು ಅವರನ್ನು ಓಲೈಸುವ ಯತ್ನ ನಡೆಸುತ್ತಿದ್ದಾರೆ.
ಜೆಡಿಎಸ್, ಕಾಂಗ್ರೆಸ್, ಬಿಎಸ್ಆರ್ ಹಾಗೂ ಕೆಜೆಪಿಯಲ್ಲಿ ಬಂಡಾಯವೆದ್ದಿದೆ. ಸಕಲೇಶಪುರ ಮೀಸಲು ಕ್ಷೇತ್ರದಿಂದ ಪಕ್ಷೇತರರಾಗಿ ದೊಡ್ಡೀರಯ್ಯ ನಾಮಪತ್ರ ಸಲ್ಲಿಸಿದ್ದರೂ ಅವರನ್ನು ಕಾಂಗ್ರೆಸ್ ಟಿಕೆಟ್ ಸಿಗದ ಸ್ಥಳೀಯರು ಅಖಾಡಕ್ಕೆ ಇಳಿಸಿ, ಸೋನಿಯಾಗಾಂಧಿ, ರಾಹುಲ್ಗಾಂಧೀ ಭಾವಚಿತ್ರ ಮುಂದಿಟ್ಟುಕೊಂಡು ಪ್ರಚಾರ ಮಾಡಿ ಗೆಲ್ಲಲು ಮುಂದಾಗಿದ್ದಾರೆ. ಇದರಿಂದ ನಷ್ಟವಾಗೋದು ಕಾಂಗ್ರೆಸ್ ಅಭ್ಯರ್ಥಿಗೇನೆ ಎಂದು ತಿಳಿದಿರುವ ಪಕ್ಷದ ಮುಖಂಡರು, ದೊಡ್ಡೀರಯ್ಯ ಅವರನ್ನು ಕಣದಿಂದ ಹಿಂತೆಗೆಸಲು ಪ್ರಯತ್ನಿಸುತ್ತಿದ್ದಾರೆ. ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಅತೃಪ್ತಗೊಂಡವರ ಹಿಂಡು: ಸಕಲೇಶಪುರ ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದಿದ್ದುದಕ್ಕೆ ಅತೃಪ್ತಗೊಂಡವರ ಹಿಂಡೆ ಇದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಡಿ.ಸಿ.ಸಣ್ಣಸ್ವಾಮಿ, ನನಗೆ ಟಿಕೆಟ್ ತಪ್ಪಲು ಮುಖಂಡ ಬಿ. ಶಿವರಾಂ ಅವರೇ ಕಾರಣ ಎಂದು ಕೆಂಡಕಾರಿದ್ದಾರೆ. ಅನೇಕರು ಹೈಕಮಾಂಡ್ ಡಿ. ಮಲ್ಲೇಶ್ಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನ ಹೊಂದಿದ್ದಾರೆ. ಇದು ಬೂದಿ ಮುಚ್ಚಿದ ಕೆಂಡದಂತೆ ಇದೆ.
ಅರಕಲಗೂಡು ಕ್ಷೇತ್ರದಲ್ಲಿ ಕೆಜೆಪಿಯಿಂದ ಸ್ಪರ್ಧಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಆಪ್ತ ಎಸ್. ಪುಟ್ಟಸ್ವಾಮಿ ಅವರು ಗಾಳ ಹಾಕುವುದು ಕಾಂಗ್ರೆಸ್ ಮತಗಳನ್ನೇ. ಆದರೂ ಕಾಂಗ್ರೆಸ್ ಮಂದಿಗೆ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಬೇರೆ ಪಕ್ಷದಿಂದ ಸ್ಪರ್ಧಿಸಿರುವುದರಿಂದ ಪುಟ್ಟಸ್ವಾಮಿ ಕಣಕ್ಕೆ ಹಿಂದೆ ಸರಿಯುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು.
ತೀವ್ರ ಅಸಮಾಧಾನ: ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ್ದಕ್ಕೆ ಬೇಸರಗೊಂಡು ಬಿಎಸ್ಆರ್ ಕಾಂಗ್ರೆಸ್ನಿಂದ ಜೆ.ಪಿ. ಜಯಣ್ಣ ಅಖಾಡಕ್ಕೆ ಇಳಿದಿರುವುದು ಕಾಂಗ್ರೆಸ್ ಮುಖಂಡರನ್ನು ತೀವ್ರ ಚಿಂತೆಗೆ ಈಡು ಮಾಡಿದೆ. ಕ್ಷೇತ್ರದಲ್ಲಿ ಬಡವರು, ದೀನದಲಿತರಿಗೆ ನಿರಂತರ ಸೇವೆ ಮಾಡುತ್ತಾ ಕೊಡುಗೈ ದಾನಿ ಎಂದೇ ಜನಪ್ರಿಯತೆ ಹೊಂದಿರುವ ಜಯಣ್ಣ ಹಿಂದುಳಿದ ವರ್ಗಕ್ಕೆ ಸೇರಿದವರು. ಅವರಿಗೆ ಟಿಕೆಟ್ ನೀಡದ ಬಗ್ಗೆ ಕೆಲ ಕಾಂಗ್ರೆಸ್ ಮುಖಂಡರಿಗೆ ಅಸಮಾಧಾನ ಉಂಟಾಗಿದೆ.
ಜಿಲ್ಲಾದ್ಯಂತ ಇರುವ 7 ಕ್ಷೇತ್ರಗಳ ಪೈಕಿ ಸಕಲೇಶಪುರ ಮೀಸಲು ಕ್ಷೇತ್ರ ಬಿಟ್ಟರೆ ಉಳಿದ 6 ಕ್ಷೇತ್ರಗಳಲ್ಲೂ ವಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದರಿಂದ ಸಹಜವಾಗಿ ವೀರಶೈವ, ಕುರುಬರು ಮತ್ತು ಹಿಂದುಳಿದ ವರ್ಗಗಳಲ್ಲಿ ಅಸಮಾಧಾನ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಚನ್ನರಾಯಪಟ್ಟಣ ಕ್ಷೇತ್ರದಲ್ಲಿ ಇತ್ತೀಚೆಗೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಟಿಕೆಟ್ ಪಡೆದಿರುವುದನ್ನು ಖಂಡಿಸಿ ಕೆಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಗೋಪಾಲಸ್ವಾಮಿ ಪಕ್ಷಕ್ಕೆ ಹಿಂದಕ್ಕೆ ಬಂದಿದ್ದಾರೆ. ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯಕುಮಾರ್, ಕಬ್ಬಳ್ಳಿ ರಂಗೇಗೌಡ, ಚಂದ್ರೇಗೌಡ ಮೊದಲಾದವರು ಈಗ ಮೆತ್ತಗಾಗಿದ್ದಾರೆ. ಆದರೂ ಕಾಂಗ್ರೆಸ್ನಲ್ಲಿ ಅಸಮಾಧಾನ ಎಂಬುದು ಕಾಣದಂತೆ ಇದೆ. ಇದನ್ನೆಲ್ಲಾ ಸರಿಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ತೀವ್ರ ಯತ್ನಿಸುತ್ತಿದ್ದಾರೆ.
ಜೆಡಿಎಸ್ನಲ್ಲೂ ಬಂಡಾಯ: ಇದೇ ಮೊದಲ ಬಾರಿಗೆ ಜೆಡಿಎಸ್ನಲ್ಲಿ ಬಂಡಾಯವೆದ್ದಿದೆ. ಜೆಡಿಎಲ್ಪಿ ನಾಯಕ ಎಚ್.ಡಿ.ರೇವಣ್ಣ ಹಾಕಿದ ಗೆರೆ ದಾಟುವ ಧೈರ್ಯ ಹಿಂದೆ ಯಾರೂ ಮಾಡಿರಲಿಲ್ಲ. ಆದರೆ ಹಾಸನ ಮತ್ತು ಬೇಲೂರು ಕ್ಷೇತ್ರಗಳಲ್ಲಿ ಮಾಡಲಾಗಿದೆ. ಇದು ಎರಡೂ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಲಿಕ್ಕೆ ಸಾಧ್ಯವಿಲ್ಲ.
ಹಿಂದಿನಿಂದಲೂ ಬೇಲೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಯಕೆಯಿಂದ ಎಚ್.ಕೆ.ಜವರೇಗೌಡರು ಕ್ಷೇತ್ರ ಸುತ್ತಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಆ ಕ್ಷೇತ್ರದಿಂದ ವೀರಶೈವ ಸಮುದಾಯಕ್ಕೆ ಸೇರಿದ ಕೆ.ಎಸ್. ಲಿಂಗೇಶ್ ಅವರಿಗೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡ ಜವರೇಗೌಡರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.
ಪ್ರತಿಪಕ್ಷ ನಾಯಕರ ಹಠಾತ್ ಭೇಟಿ: ಜೆಡಿಎಸ್ನಿಂದ ದೂರವಿರುವ ಜವರೇಗೌರನ್ನು ತಮ್ಮ ಹತ್ತಿರ ಸೆಳೆದುಕೊಳ್ಳಲು ಬೇಲೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೈ.ಎನ್. ರುದ್ರೇಶ್ಗೌಡ ಮತ್ತು ಕೆಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಭೇಟಿ ಮಾಡಿ, ತಮ್ಮನ್ನು ಬೆಂಬಲಿಸಲು ಕೋರಿದ್ದಾರೆ.
ಟಿಕೆಟ್ ಸಿಗದೇ ಬೇಲೂರು ಕ್ಷೇತ್ರದಿಂದ ಬಂಡಾಯ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಬಿ.ಸಿ. ಮಂಜುನಾಥ್ ಅವರನ್ನು ಓಲೈಸುವ ಯತ್ನ ನಡೆಯುತ್ತಿದೆ. ಜಿಪಂ ಸದಸ್ಯ ಮಂಜುನಾಥ್ ಪತ್ನಿ ಹೇಮಾವತಿ ಅವರನ್ನು ಜಿಪಂ ಅಧ್ಯಕ್ಷರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಒಪ್ಪಿದರೆ ಮಂಜುನಾಥ್ ನಾಮಪತ್ರ ಹಿಂತೆಗೆಯುವ ಸಂಭವ ಇದೆ.
ಶುಕ್ರವಾರ ನಗರಕ್ಕೆ ಆಗಮಿಸುವ ಮಾಜಿ ಪ್ರಧಾನಿ ದೇವೇಗೌಡ, ಜವರೇಗೌಡ, ಬಿ.ಸಿ. ಮಂಜುನಾಥ್ ಅವರೊಡನೆ ಹಾಗೂ ಹಾಸನ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯಿಂದ ಬೇಸರಗೊಂಡ ಮುಖಂಡರೊಡನೆ ಸಮಾಲೋಚನೆ ನಡೆಸುವರು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಬಿಎಸ್ಪಿಯಲ್ಲೂ ಬಂಡಾಯ: ಹಾಸನ ಕ್ಷೇತ್ರದಿಂದ ಬಿಎಸ್ಆರ್ ಕಾಂಗ್ರೆಸ್ನಿಂದ ಸ್ಪರ್ಧಿಸಲು ಎ.ಪಿ. ಅಹಮದ್ ಹಾಗೂ ಸಲೀಂಖಾನ್ ನಾಮಪತ್ರ ಸಲ್ಲಿಸಿದ್ದಾರೆ. ಬಿಎಸ್ಪಿಯಿಂದ ಉಚ್ಚಾಟನೆಗೊಂಡ ನಂತರ ಬಿಎಸ್ಆರ್ ಕಾಂಗ್ರೆಸ್ ಸೇರಿರುವ ಅಹಮದ್ ಅವರೇ ಈಗ ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿರುವ ಸಲೀಂ ಅವರು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮನಮೊಲಿಸ ಬೇಕಾಗಿದೆ.
ಸಕಲೇಶಪುರ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಲು ಎಚ್.ಎಸ್. ಕುಮಾರ್ ಹಾಗೂ ಎಚ್.ಎಸ್. ಸುಬ್ರಮಣ್ಯ ನಾಮಪತ್ರ ಸಲ್ಲಿಸಿದ್ದಾರೆ. ಅವರಿಬ್ಬರಲ್ಲಿ ಒಬ್ಬರ ನಾಮಪತ್ರ ತೆಗೆಸಲು ಆ ಪಕ್ಷದ ಮುಖಂಡರು ಯತ್ನಿಸುತ್ತಿದ್ದಾರೆ.
ಉಳಿದಂತೆ ಕೆಜೆಪಿ ಮತ್ತು ಬಿಜೆಪಿಯಲ್ಲಿ ಹಾಸನ, ಅರಸೀಕೆರೆ ಮತ್ತು ಬೇಲೂರು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ವಿಚಾರ ತೀವ್ರ ಅಸಮಾಧಾನ ತಂದಿದ್ದರೂ ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿಲ್ಲ. ಕೆಜೆಪಿಯಿಂದ ಟಿಕೆಟ್ ಸಿಗದೇ ಬೇಸರವಾಗಿ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿರುವ ಬಿ. ಶಿವರುದ್ರಪ್ಪ ನಾಮಪತ್ರ ಹಿಂತೆಗೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ದಯಾಶಂಕರ ಮೈಲಿ