'ಬಿಎಸ್ವೈ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ'
ಕ.ಪ್ರ.ವಾರ್ತೆ ಅರಸೀಕೆರೆ ಏ.18
ಕೆಜೆಪಿ ಅಭ್ಯರ್ಥಿ ಡಾ.ಲೋಕೇಶ್ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಪಟ್ಟಣದಲ್ಲಿ ಬುಧವಾರ ಮೆರವಣಿಗೆ ನಡೆಸಿ ಮಿನಿ ವಿಧಾನಸೌಧದಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರದಾದ್ಯಂತ ಬಿ.ಎಸ್.ಯಡಿಯೂರಪ್ಪನವರ ಪರವಾದ ಅಲೆ ಕಂಡುಬರುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕೆಜೆಪಿಯತ್ತ ಆಕರ್ಷಿತರಾಗುತ್ತಿದ್ದು, ಜನರು ತೋರುತ್ತಿರುವ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಎಂದರು. ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ. ಅವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ಭೇಟಿ ನೀಡಿ ಮನವರಿಕೆ ಮಾಡಿಕೊಡುವ ಮೂಲಕ ಮತಯಾಚನೆ ಮಾಡುವುದರೊಂದಿಗೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮ ಹತ್ತಿರದ ಪ್ರತಿ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ಪಕ್ಷವನ್ನು ಹಾಗೂ ಅಭ್ಯರ್ಥಿಗಳನ್ನು ನಾನು ಲಘುವಾಗಿ ಪರಿಗಣಿಸುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅನಿವಾರ್ಯ ಸ್ಪರ್ಧೆ ಆರೋಗ್ಯಕರವಾಗಿರ ಬೇಕೆಂಬುದೇ ತಮ್ಮ ಬಯಕೆಯಾಗಿದೆ ಎಂದರು.
ಈಗಾಗಲೇ ಸೋಲಿನ ಭೀತಿಯನ್ನು ಎದುರಿಸುತ್ತಿರುವ ಕೆಲವರು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು ಇವರು ಈ ಹಿಂದಿನ ಚುನಾವಣೆಯಲ್ಲೂ ಕೂಡ ಇದೇ ರೀತಿಯ ಸುಳ್ಳು ವದಂತಿಗಳನ್ನು ಹಬ್ಬಿಸಿ ಕುತಂತ್ರ ರಾಜಕಾರಣದಿಂದ ಪ್ರಾಮಾಣಿಕ ವ್ಯಕ್ತಿಯೊಬ್ಬರನ್ನ ಸೋಲಿಸಿದ ಉದಾಹರಣೆ ಕಣ್ಮುಂದಿದ್ದರೂ ಈಗಲೂ ಅದೇ ಚಾಳಿಯನ್ನು ಮುಂದುವರೆಸಿರುವುದು ಸರಿಯಲ್ಲ. ಇದು ಈ ಕ್ಷೇತ್ರದ ಮತದಾರರಿಗೆ ಮಾಡುತ್ತಿರುವ ಅಪಮಾನವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ರಿಲೈಯನ್ಸ್ನ ಲೋಕೇಶ್ ಸೇರಿದಂತೆ ನೂರಾರು ಯುವ ಮುಖಂಡರು ಜೆಡಿಎಸ್, ಕಾಂಗ್ರೆಸ್ ತೊರೆದು ಕೆಜೆಪಿ ಸೇರಿದರು.ಮುಖಂಡ ಹುಲ್ಲೇಕೆರೆ ಕುಮಾರ್, ಲಾಳನಕೆರೆ ಮಹಾಲಿಂಗಪ್ಪ, ಗೊಲ್ಲರಹಳ್ಳಿ ವಾಸು, ಎಸ್.ಆರ್.ಪುಟ್ಟಸಿದ್ದೇಗೌಡ, ಕೆ.ವಿ.ಎನ್. ಶಿವು, ವಿಜಯ್ ವಿಕ್ರಮ್ ಹಾರ್ನಳ್ಳಿ ನಂದೀಶ್, ಗೀಜಿಹಳ್ಳಿ ಮೋಹನ್, ಚಂದ್ರು, ಇಂದ್ರೀಸ್ ಇತರರು ಇದ್ದರು.