ಶೇ. 80 ರಷ್ಟು ಹದಗೆಟ್ಟ ರಸ್ತೆಗಳು
ಕ.ಪ್ರ. ವಾರ್ತೆ ಆಲೂರು ಏ. 18
ತಾಲೂಕಿನಾದ್ಯಂತ ಶೇ. 80 ರಸ್ತೆಗಳು ಹದಗೆಟ್ಟಿದ್ದು, ಈ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವಾಗ ವಾಹನ ಸವಾರರರು, ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾರೆ.
ಆಲೂರು ಪಟ್ಟಣದ ಮುಖ್ಯ ರಸ್ತೆಯಿಂದ ಹಿಡಿದು ಗ್ರಾಮೀಣ ಭಾಗದಲ್ಲಿನ ರಸ್ತೆಗಳವರೆಗೂ ಎಲ್ಲ ರಸ್ತೆಗಳು ಹಾಳಾಗಿದ್ದು, ರಸ್ತೆಗಳಲ್ಲಿ ಮಂಡಿ ಉದ್ದದಷ್ಟು ಗುಂಡಿಗಳು ಬಿದ್ದಿವೆ.
ಇಂತಹ ರಸ್ತೆಗಳಲ್ಲಿ ಒಂದು ಕಿಲೋಮೀಟರ್ ಸಂಚರಿಸುವುದು ಸಾಹಸವೇ ಸೈ. ಡಾಂಬರ್ ರಸ್ತೆಗಳು ಮಾಯವಾಗಿ ಮಾರುದ್ಧದ ಗುಂಡಿಗಳಿಂದ ಕೂಡಿರುವ ಕಲ್ಲುಮಣ್ಣಿನ ರಸ್ತೆ ಗೋಚರಿಸುತ್ತದೆ.
ಈ ರಸ್ತೆಯಲ್ಲಿ 1 ಕಿ.ಮೀ. ಸಂಚರಿಸಲು 15 ನಿಮಿಷ ಬೇಕು. ಮಳೆಗಾಲದಲ್ಲಿಯಂತೂ ಈ ರಸ್ತೆಗಳ ಸ್ಥಿತಿ ಹೇಳತೀರದು. ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ತಿಳಿಯದಾಗಿದ್ದು, ಈ ಕಾರಣದಿಂದ ಅನೇಕ ಬಾರಿ ಅಪಘಾತಗಳೂ ಸಂಭವಿಸಿವೆ.
ಆಲೂರಿನಿಂದ ಕೇವಲ 20 ಕಿ.ಮೀ. ದೂರದಲ್ಲಿರುವ ಮಗ್ಗೆ ಗ್ರಾಮಕ್ಕೆ ಹೋಗಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ ಎಂದರೆ ನೀವೇ ಲೆಕ್ಕಹಾಕಿ.
ಎಲ್ಲಾ ಡಕೋಟ ಬಸ್‌ಗಳೇ: ಈ ರಸ್ತೆಗಳಲ್ಲಿ ಸಾರಿಗೆ ಬಸ್ ಹಾಗೂ ಟೆಂಪೋಗಳಲ್ಲಿ ಪ್ರಯಾಣಿಸುವುದೆಂದರೆ ನರಕ ದರ್ಶನ ಮಾಡಿಕೊಂಡು ಬಂದಂತೆಯೇ ಸರಿ. ಏಕೆಂದರೆ ಗ್ರಾಮೀಣ ಭಾಗದಲ್ಲಿ ಸಂಪೂರ್ಣ ಹಾಳಾದ ಹಾಗೂ ಸುಸ್ಥಿತಿಯಲ್ಲಿ ಇಲ್ಲದ ಡಕೋಟ ಬಸ್‌ಗಳನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಕುತ್ತಿದೆ. ಈ ಬಸ್‌ಗಳಲ್ಲಿನ ಆಸನಗಳು ಹರಿದಿದ್ದು, ಮಳೆಯಲ್ಲಿ ಸೋರುವ ಕಿಟಕಿ ಬಾಗಿಲುಗಳು, ಸರಿಯಾಗಿ ಇಲ್ಲದ ಕರ್ಕಶ ಶಬ್ದ ಮಾಡುವ ಟೈರ್‌ಗಳು ಸಹ ಸರಿ ಇಲ್ಲದೇ ಒಟ್ಟಾರೆ ಪ್ರಯಾಣ ಮಾತ್ರ ಹರೋಹರ.
ಹೆಚ್ಚು ಬಸ್‌ಗಳು ಗ್ರಾಮೀಣ ಭಾಗಗಳಿಗೆ ಬಿಡದ ಕಾರಣ ಗ್ರಾಮಗಳಿಗೆ ಹೋಗಲು ತಾಲೂಕು ಕೇಂದ್ರದಿಂದ ಹೊರಡುವ ಕೆಲವೇ ಬಸ್‌ಗಳಲ್ಲಿ ನಿಲ್ಲಲು ಸಹ ಸ್ಥಳವಿಲ್ಲದಂತಾಗಿ ಬಾಗಿಲುಗಳಲ್ಲಿ ನೇತಾಡಿಕೊಂಡು ಗುಂಡಿಮಯ ರಸ್ತೆಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಯಾರ್ಯಾರಿಗೆ ಶಾಪ ಹಾಕುತ್ತಾರೆಂದು ಯಾರು ಬೇಕಾದರೂ ಹೇಳಬಹುದು. ಈ ರೀತಿ ಪ್ರಯಾಣಿಸುವಾಗ ಅಪಘಾತಗಳಾಗಿ ಹಲವು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿರುವುದು ಉಂಟು.
ಆಮೆಗತಿಯಲ್ಲಿ ಕಾಮಗಾರಿ: ಹಲವು ರಸ್ತೆಗಳ ಕಾಮಗಾರಿ ಆರಂಭವಾಗಿದ್ದು, ಈ ಕೆಲಸ ಆಮೆಗತಿಯಲ್ಲಿ ಸಾಗುತ್ತಿವೆ. ಅವುಗಳಲ್ಲಿ ಮುಖ್ಯವಾಗಿ ಬಿಕ್ಕೋಡು, ಆಲೂರು, ಬೈರಾಪುರ ಮಾರ್ಗವಾಗಿ ಹರಿಹಳ್ಳಿ ಟೆಂಪಲ್‌ವರೆಗೂ ಪಾಳ್ಯ ಗ್ರಾಮದಿಂದ ಹಳೆ ಪಾಳ್ಯ ಮಾರ್ಗವಾಗಿ ಮಗ್ಗೆ ಗ್ರಾಮಕ್ಕೂ ಬಾಳ್ಳುಪೇಟೆಯಿಂದ, ಕೆಂಚಮ್ಮನ ಹೊಸಕೋಟೆ ರಸ್ತೆ ಸೇರಿದಂತೆ ಕ್ಷೇತ್ರವಾರು ತೆಗೆದುಕೊಂಡರೆ, ಶೆಟ್ಟಿಹಳ್ಳಿ, ಕಟ್ಟಾಯ ರಸ್ತೆ, ಹಾನುಬಾಳು ಹುರುಡಿ, ಹೆತ್ತೂರು ವಣಗೂರು ರಸ್ತೆ, ಪಿಡಬ್ಲ್ಯುಡಿಯಿಂದ 10 ಕೋಟಿ ರು. ವೆಚ್ಚದಲ್ಲಿ ನಾಲ್ಕು ರಸ್ತೆಗಳು ಮಂಜೂರಾಗಿದ್ದು, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.
ಇನ್ನು ಎಚ್‌ಆರ್‌ಪಿ ಅನುದಾನದಲ್ಲಿ 6 ಕೋಟಿ ರು. ಬಿಡುಗಡೆಯಾಗಿದ್ದು, ಮಗ್ಗೆ ಹುಸ್ಕೂರ್ ರಸ್ತೆ, ಆಂಜಿಹಳ್ಳಿ ರಸ್ತೆ, ಸುಳಗೋಡು ರಸ್ತೆ, ಬ್ಯಾಬಾದಿಂದ ಶಿವಸಾಗರ ರಸ್ತೆ, ಬ್ಯಾಬಾ ಕಾಲೋನಿ ರಸ್ತೆ, ಸೊಪ್ಪನಹಳ್ಳಿ ರಸ್ತೆ, ಮಣಿಗನಹಳ್ಳಿ ರಸ್ತೆ, ಹುಲುಕುಂದ ಮಾದಿಹಳ್ಳಿ ರಸ್ತೆ, ತಿಪ್ಪನಹಳ್ಳಿ ಕಾಲೋನಿ ಕಾಂಕ್ರಿಟ್ ರಸ್ತೆ, ಚಿಟ್ನಹಳ್ಳಿ ಕಾಲೋನಿ, ಹಳವಳ್ಳಿ ಕಾಲೋನಿ, ನೆಲ್ಗೆರೆ ಮಾದಹಳ್ಳಿ ರಸ್ತೆ ಸೇರಿದಂತೆ ನಬಾರ್ಡ್ ವತಿಯಿಂದ ಗಂಗರ ಗ್ರಾಮಕ್ಕೆ 2 ಕಿ.ಮೀ. ರಸ್ತೆ ಸೇರಿದಂತೆ ಹಲವು ಗ್ರಾಮಗಳಿಗೂ ರಸ್ತೆ ಮಂಜೂರಾಗಿದ್ದು, ಈ ರಸ್ತೆಗಳ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಡೆಯುವಂತೆ ಗ್ರಾಮಸ್ಥರೇ ಮುತುವರ್ಜಿ ವಹಿಸಿ, ಗ್ರಾಮದ ರಸ್ತೆಗಳನ್ನು ಕಾಪಾಡಿಕೊಳ್ಳದೆ ಹೋದರೆ ಮೂರ್ನಾಲ್ಕು ತಿಂಗಳಲ್ಲಿ ಮತ್ತೆ ಯಥಾಸ್ಥಿತಿ ಏರ್ಪಡಲಿರುವುದಂತೂ ಸತ್ಯ.
ವಾಹನ ಅಪಘಾತಕ್ಕೆ ಲೆಕ್ಕವಿಲ್ಲ
ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ, ತಾಲೂಕಿನ ಮಗ್ಗೆ ರಸ್ತೆಯ ಹೊನ್ನೇನಹಳ್ಳಿ ಕೂಡಿಗೆ ಬಳಿ ಕೆಲ ತಿಂಗಳ ಹಿಂದೆ ಸಾರಿಗೆ ಬಸ್ ಗುಂಡಿ ತಪ್ಪಲು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಟಿಪ್ಪರ್‌ಲಾರಿಗೆ ಬಸ್ ಡಿಕ್ಕಿ ಹೊಡೆದು ಕಂಡಕ್ಟರ್ ಸೇರಿದಂತೆ ಮೂವರು ಮೃತಪಟ್ಟು 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಇನ್ನು ಬೈಕ್ ಸವಾರರು ಲೆಕ್ಕವಿಲ್ಲದಷ್ಟು ಬಾರಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ರಸ್ತೆಗಳಲ್ಲಿ ಪ್ರತಿ ದಿನವೂ ಅಪಘಾತಗಳು ತಪ್ಪದಂತಾಗಿದೆ. ಪೊಲೀಸ್ ಠಾಣೆ ಸುತ್ತ ಅಪಘಾತಕ್ಕೀಡಾದ ವಾಹನಗಳೇ ತುಂಬಿ ತುಳುಕುತ್ತಿವೆ. ಇದಕ್ಕೆಲ್ಲ ಆಡಳಿತ ನಡೆಸುವವರ ಮಲತಾಯಿ ಧೋರಣೆಯೇ ಕಾರಣವಾಗಿದೆ. ಕನಿಷ್ಠ ಮುಖ್ಯ ರಸ್ತೆಗಳನ್ನು ಸರಿಪಡಿಸದ ಇಲಾಖೆಯವರು ಗ್ರಾಮೀಣ ರಸ್ತೆಗಳನ್ನು ಸರಿಪಡಿಸುವವರೇ ಎಂಬ ಪ್ರಶ್ನೆ ಗ್ರಾಮೀಣ ಭಾಗದವರನ್ನು ಕಾಡದೇ ಇರದು.