ಸಕಲೇಶಪುರ: ನೂತನ ಠಾಣೆ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಸಕಲೇಶಪುರ, ಏ. 18
ಪೋಲಿಸ್ ಇಲಾಖೆಯಿಂದ ಸಾರ್ವಜನಿಕರೊಂದಿಗೆ ಸೌಜನ್ಯ ವರ್ತನೆ ಹಾಗೂ ಉತ್ತಮ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಡಾ. ರಾಮಚಂದ್ರ ತಿಳಿಸಿದರು.
ಪಟ್ಟಣ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಲಯಗಳಿಂದ ಬರುವ ಸಮನ್ಸ್ ಮತ್ತು ವಾರೆಂಟ್‌ಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಳಾಸಕ್ಕೆ ತಲುಪಿಸುವುದರಲ್ಲಿ ಪೊಲೀಸರಿಂದ ವಿಳಂಬವಾಗುವುದರಿಂದ ಕೇಸುಗಳು ಇತ್ಯರ್ಥವಾಗದೆ ಉಳಿದಿವೆ. ಇಂತಹುಗಳನ್ನು ಸರಿಪಡಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಆದೇಶ ನೀಡಲಾಗಿದೆ ಎಂದರು.
ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿರುವ ತಾಲೂಕುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ನೆರವಾಗುವಂತೆ ಹಲವಾರು ವಾಹನಗಳನ್ನು ಒದಗಿಸಲಿದ್ದು ಇದನ್ನು ಸದ್ಬಳಕೆ ಮಾಡಿ ಉತ್ತಮ ಸೇವೆ ನೀಡುವಂತೆ ಕಿವಿಮಾತು ಹೇಳಿದರು.
ನಕ್ಸಲ್ ಹಾವಳಿ ಬಗ್ಗೆ ಮಾತನಾಡಿ, ಮಲೆನಾಡಿನ ಭಾಗದ ಜನರು ಪ್ರಜ್ಞಾವಂತರಾಗಿದ್ದು, ಇಲಾಖೆಗೆ ಮಾಹಿತಿ ತಿಳಿಸುವುದಲ್ಲದೆ ಎ.ಎನ್.ಎಫ್.ನವರು ಬರುವ ಮುನ್ನವೇ ಕಾರ್ಯ ಪ್ರವೃತ್ತರಾಗಲು ಪೊಲೀಸ್ ಇಲಾಖೆ ಸಶಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಅಮಿತ್ ಸಿಂಗ್, ಅರಸೀಕೆರೆ ವಿಭಾಗದ ಅಧಿಕಾರಿ ಮಂಜುನಾಥ್, ವೃತ್ತ ನಿರೀಕ್ಷಕ ದಿನೇಶ್ ಪಾಟೀಲ್, ಪಟ್ಟಣ ಠಾಣಾ ಪಿ.ಎಸ್.ಐ ಜೀವನ್ ಹಾಗೂ ಸಿಬ್ಬಂದಿ ಇದ್ದರು. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿ ಇದ್ದುದರಿಂದ ಯಾವುದೇ ರಾಜಕಾರಣಿಗಳಾಗಲಿ ಸಾರ್ವಜನಿಕರು ಭಾಗವಹಿಸಲಿಲ್ಲ.