ಬೆಂಗಳೂರು ಸ್ಫೋಟ; ರಾಜಕಾರಣಕ್ಕೆ ವಿಹಿಂಪ, ಬಜರಂಗದಳ ಖಂಡನೆ
ಕ.ಪ್ರ.ವಾರ್ತೆ ಸಕಲೇಶಪುರ ಏ.19
ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಖಂಡಿಸಿ ತಾಲೂಕು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಗುರುವಾರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ವಿಎಚ್‌ಪಿ, ಬಜರಂಗದಳದ ತಾಲೂಕು ಪ್ರಮುಖ್ ರಮೇಶ್ ಮಾತನಾಡಿ, ಏ.17 ರಂದು ಬೆಂಗಳೂರಿನಲ್ಲಿ ಉಗ್ರಗಾಮಿಗಳು ಬಿಜೆಪಿ ಪ್ರಧಾನ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ಬಾಂಬ್ ಸ್ಫೋಟಿಸಿದ್ದಾರೆ.
ಚುನಾವಣೆ ಸಮಯವಾಗಿರುವುದರಿಂದ ಬಿಜೆಪಿ ಕಚೇರಿಗೆ ಬರುವ ಗಣ್ಯರನ್ನು ಹತ್ಯೆ ಮಾಡಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಿ ಚುನಾವಣೆಯನ್ನು ನಡೆಯದಂತೆ ಮಾಡುವುದು ಇವರ ಯೋಜನೆಯಾಗಿತ್ತೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇದರು ವಿರುದ್ದ ರಾಜ್ಯದ ರಾಜಕೀಯ ಪಕ್ಷಗಳು ಪಕ್ಷ ಭೇದ ಬಿಟ್ಟು ಖಂಡಿಸುವ ಬದಲು ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ನಿರತವಾಗಿವೆ ಎಂದು ಟೀಕಿಸಿದರು.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವ ಮೂಲಕ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳಬೇಕೆಂದು ತಾಲ್ಲೂಕು ವಿಶ್ವ ಹಿಂದೂ ಪರಿಷತ್, ಬಜರಂಗದಳ ಮನವಿ ಮಾಡಿರುತ್ತದೆ ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಂಡರುಗಳಾದ ವಿಜಯ್‌ಕುಮಾರ್, ಪ್ರದೀಪ್, ಧರ್ಮೇಶ್, ಸುಧೀರ್, ರಾಜಣ್ಣ, ದೀಪಕ್ ಮತ್ತು ಶಿವಪ್ರಸಾದ್ ಇದ್ದರು.