ಶಾಂತಿಯುತ ಮತದಾನಕ್ಕೆ ಸಹಕರಿಸಿ: ಪಾರ್ಕೆ
ಹಾಸನ: ಚುನಾವಣೆ ನೀತಿ ಸಂಹಿತೆಯನ್ನು ಯಾವುದೇ ಕಾರಣಕ್ಕೆ ಉಲ್ಲಂಘನೆಯಾಗದಂತೆ ಹಾಗೂ ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತ ಮತದಾನಕ್ಕೆ ಸಹಕಾರ ನೀಡುವಂತೆ ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಭಾರತ್ ಡಿ. ಪಾರ್ಕೆ ತಿಳಿಸಿದ್ದಾರೆ. ಹಾಸನ ಕ್ಷೇತ್ರದ ಚುನಾವಣಾ ಕಚೇರಿಯಲ್ಲಿಂದು ನಾಮಪತ್ರಗಳ ಪರಿಶೀಲನೆ ಕಾರ್ಯದ ನಂತರ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳೊಂದಿಗೆ ಗುರುವಾರ ಸಭೆ ನಡೆಸಿದ ವೀಕ್ಷಕರು ಮಾದರಿ ನೀತಿ ಸಂಹಿತೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿ ಅನುಸರಿಸುವಂತೆ ಸೂಚಿಸಿದರು. ಸಭೆ ಸಮಾರಂಭ ನಡೆಸಲು, ಕರಪತ್ರಗಳನ್ನು ಮುದ್ರಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮದುವೆ, ನಾಮಕರಣ ಮತ್ತಿತರ ಖಾಸಗಿ ಸಮಾರಂಭ ಹೊರತುಪಡಿಸಿ ಇತರ ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ಅಭ್ಯರ್ಥಿಗಳು ಪಾಲ್ಗೊಂಡರೆ ಅದನ್ನು ಸಹ ಖರ್ಚು ವೆಚ್ಚಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು ಎಂದು ಅವರು ಹೇಳಿದರು. ಒಟ್ಟಾರೆ ಯಾವುದೇ ನಿಯಮ ಉಲ್ಲಂಘನೆಯಾಗದಂತೆ ಚುನಾವಣೆ ಎದುರಿಸಬೇಕು ಎಂದು ವೀಕ್ಷಕರು ತಿಳಿಸಿದರು. ಚುನಾವಣಾಧಿಕಾರಿ ಚಿದಾನಂದ್, ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.