ಸಕಲೇಶಪುರದಲ್ಲಿ ಕೆಜೆಪಿಗೆ ಮುಸ್ಲಿಮರ ಬೆಂಬಲ
ಕ.ಪ್ರ. ವಾರ್ತೆ ಸಕಲೇಶಪುರ್ಣ ಏ.19
ತಾಲೂಕಿನ ಮುಸ್ಲಿಂ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಲಬಾಬೀನ್ ಮಸೀದಿ ಸಮೀಪ ಪುರಸಭೆಯ ಮಾಜಿ ಉಪಾಧ್ಯಕ್ಷ ಶಬ್ಬೀರ್ ಖಾನ್ ಕಚೇರಿಯಲ್ಲಿ ಸಮಾಲೋಚನೆ ನಡೆಸಿದ ತಾಲೂಕಿನ ಮುಸ್ಲಿಂ ಮುಖಂಡರು ಹಾಗೂ ನಾನಾ ಸಂಘಟನೆಗಳ 500ಕ್ಕೂ ಹೆಚ್ಚು ಪ್ರಮುಖರು ಈ ಬಾರಿ ಕೆಜೆಪಿಗೆ ಬೆಂಬಲಿಸಲು ನಿರ್ಣಯ ಕೈಗೊಂಡರು.
ಕೆಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಬಿ ಆರ್. ಗುರುದೇವ್, ಜಿಪಂ ಸದಸ್ಯೆ ಜ್ಯೋತಿ ಗುರುದೇವ್, ಕೆಜೆಪಿ ಮುಖಂಡ ಸಲೀಂ, ಆಲಂ, ಅಶ್ರಫ್, ಹರೀಶ್ ಸಮ್ಮುಖದಲ್ಲಿ ಕೆಲಕಾಲ ಚರ್ಚೆ ನಡೆಸಿದ ಶಬ್ಬೀರ್ ಖಾನ್ ಮತ್ತು ಬೆಂಬಲಿಗರು ಕೆಜೆಪಿ ಪಕ್ಷಕ್ಕೆ ಬೆಂಬಲಿಸುವುದಾಗಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಬ್ಬೀರ್ ಖಾನ್, ಚುನಾವಣೆ ಎಂಬುದು ಪ್ರಜಾಪ್ರಭುತ್ವದ ತಳಹದಿ. ನಾವು ಜಾತಿ, ಧರ್ಮ, ಪಕ್ಷಗಳ ಹಿಂದೆ ಹೋಗುವುದರಲ್ಲಿ ಅರ್ಥವಿಲ್ಲ. ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯೇ ನಮ್ಮ ಆಯ್ಕೆ ಯಾಗಬೇಕು ಎಂಬ ಧೋರಣೆಗೆ ಒತ್ತು ಕೊಟ್ಟು ಕೆಜೆಪಿಗೆ ಬೆಂಬಲಿಸುವುದಾಗಿ ಹೇಳಿದರು.
ನಾವು ಕಾಂಗ್ರೆಸ್ ಬೆಂಬಲಿಗರು. ಕಳೆದ ಪುರಸಭೆಯ ಚುನಾವಣೆಯಲ್ಲಿ 5 ಪುರಸಭೆಯ ಅಭ್ಯರ್ಥಿಗಳ ಆಯ್ಕೆಗೆ ಶ್ರಮಿಸಿದ್ದೆವು. ಆದರೆ ಕಾಂಗ್ರೆಸ್ ಮುಖಂಡರು ಅಭ್ಯರ್ಥಿ ಡಿ. ಮಲ್ಲೇಶ್‌ಗೆ ಟಿಕೆಟ್ ನೀಡುವಾಗ ಯಾರನ್ನು ವಿಶ್ವಾಸಕ್ಕೆ ತೆಗೆದು ಕೊಂಡಿಲ್ಲ, ಪಕ್ಷದ ಆಂತರಿಕ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಲಿಲ್ಲ. ನಾವು ಪಕ್ಷ ಎಂದು ಕುಳಿತರೆ ಜೆಡಿಎಸ್ ಗೆಲ್ಲಬಹುದು. ಕೆಜೆಪಿ ಗೆದ್ದರೆ ಸರ್ಕಾರ ರಚಿಸುವ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಮಹಮ್ಮದ್ ಪೈಝಾನ್, ಅಂಜದ್ ಖಾನ್, ಫಾರುಖ್, ಜಮೀಲ್, ಡಿಎಂಆರ್ ಮುದ್ದಸಿರ್, ರಿಯಾಜ್, ಕೆಜೆಪಿ ಮುಖಂಡರಾದ ಪ್ರಶಾಂತ್, ಅರುಣ್ ಮುಂತಾದವರು ಇದ್ದರು.