ಜೆಡಿಎಸ್ ಅಭ್ಯರ್ಥಿ ಪ್ರಕಾಶ್, ರಾಜೇಗೌಡರಿಂದ ಜಂಟಿ ಪ್ರಚಾರ
ಕನ್ನಡಪ್ರಭ ವಾರ್ತೆ ಹಾಸನ ಏ 20
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಎಸ್.ಪ್ರಕಾಶ್ ಅವರು ಶನಿವಾರ ಪ್ರಚಾರ ಕಾರ್ಯ ಪ್ರಾರಂಭಿಸಿದರು. ನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ಟಿಕೆಟ್ ಸಿಗದೇ ಬೇಸರಗೊಂಡಿದ್ದ ಮುಖಂಡ ಕೆ.ಎಂ. ರಾಜೇಗೌಡರು ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಪ್ರಕಾಶ್ ಮಾತನಾಡಿ, ಈ ಚುನಾವಣೆಗೆ ಪ್ರಚಾರಕ್ಕೆ ಕಡಿಮೆ ಕಾಲಾವಕಾಶವಿದ್ದು, ಎಲ್ಲರೂ ಒಟ್ಟಾಗಿ ಸಹಕಾರದಿಂದ ಪ್ರಚಾರ ನಡೆಸಬೇಕು. ಎಲ್ಲಾ ಕಡೆಗಳಲ್ಲಿ ಒಬ್ಬರಿಂದಲೇ ಪ್ರಚಾರ ಸಾಧ್ಯವಾಗದು. ಮತದಾರರು ನನ್ನನ್ನು ಬೆಂಬಲಿಸಿ ಮತ ಹಾಕುವಂತೆ ಮನವಿ ಮಾಡಿದರು. ಮುಖಂಡ ರಾಜೇಗೌಡ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಪ್ರಚಾರ ಕಾರ್ಯಕೈಗೊಂಡಿದ್ದು, ಮುಂದೆ ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಶ್ರಮವಹಿಸಬೇಕು. 7 ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸುವಂತೆ ಪಕ್ಷ ಸಂಘಟನೆ ಮಾಡಬೇಕು. ಈ ಮೂಲಕ ಪಕ್ಷವನ್ನು ಬಲ ಪಡಿಸಬೇಕು ಎಂದು ಹೇಳಿದರು. ಈ ಕ್ಷೇತ್ರದಿಂದ ನಾನು ಸಹ ಆಕಾಂಕ್ಷಿಯಾಗಿದ್ದೆ. ಅದರೆ ಎಚ್.ಎಸ್.ಪ್ರಕಾಶ್ ಅವರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿ ಪಕ್ಷ ತೀರ್ಮಾನಿಸಿ ಕಣಕ್ಕಿಳಿಸಿದ್ದಾರೆ. ಆದಕ್ಕೆ ಕಾರ್ಯಬದ್ಧರಾಗಿ ಎಲ್ಲರು ಕೆಲಸ ಮಾಡುವ ಮೂಲಕ ಪಕ್ಷ ಅಧಿಕಾರಕ್ಕೆ ಬರಲು ಸಹಕರಿಸಬೇಕು ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಆರ್.ಸತ್ಯನಾರಾಯಣ್, ನಗರಸಭೆ ಸದಸ್ಯ ಎಚ್.ಎಸ್.ಅನಿಲಲ್ಕುಮಾರ್, ಪ್ರಸನ್ನ ಕೃಷ್ಣಮೂರ್ತಿ, ಅಂಬಿಕಾ ರವಿಶಂಕರ್, ದೊಡ್ಡೇಗೌಡ ಇದ್ದರು.