ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಚನ ಸಾಹಿತ್ಯದಿಂದ ಸಾಮಾಜಿಕ ಕ್ರಾಂತಿ

Vishwanath S
Updated On : 21 Apr 2013, 1:18 am

ಕ.ಪ್ರ. ವಾರ್ತೆ  ಹಾಸನ  ಏ.20
ಕನ್ನಡದ ದೇಶಿಯ ಸಾಹಿತ್ಯ, ಜಾನಪದ ಸಾಹಿತ್ಯದ ಗದ್ಯ ಮತ್ತು ಪದ್ಯದ ನಡುವೆ ವಚನ ಸಾಹಿತ್ಯ ರಚನೆಯಾಯಿತು. ಇದು ಸಾಮಾಜಿಕ ಕ್ರಾಂತಿಗೆ ಇಂಬು ನೀಡಿತು ಎಂದು ಅಖಿಲ ಕರ್ನಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಮಳಲಿ ವಸಂತ ಕುಮಾರ್ ತಿಳಿಸಿದರು.
ಜಿಲ್ಲಾ ವಚನ ಸಾಹಿತ್ಯ ಪರಿಷತ್, ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಕ್ತಿ ಬಂಡಾರಿ ಬಸವಣ್ಣ, ದೇವರ ದಾಸಿಮಯ್ಯ ವಚನಕಾರರಾಗಿ ಸಮಾಜ ಪರಿವರ್ತನೆಗೆ ಬಹುವಾಗಿ ಶ್ರಮಿಸಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ಜಾತೀಯತೆ ತೊಡೆದು ಹಾಕಲು ವಚನ ಕ್ರಾಂತಿ ನಡೆಸಿ, ಈ ಶತಮಾನದಲ್ಲಿ ಹಲವು ಕ್ರಾಂತಿಗಳನ್ನು ನಡೆಸುವ ಮೂಲಕ ವಚನ ಸಾಹಿತ್ಯಕ್ಕೆ ಪ್ರಾಮುಖ್ಯತೆ ನೀಡಿದರು ಎಂದರು.
 ದೇವರ ದಾಸಿಮಯ್ಯನವರು ವಚನ ಸಾಹಿತ್ಯಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಆದರೆ ಒಬ್ಬ ಮಹಿಳೆ ದೇವರ ದಾಸಿಮಯ್ಯ ವಚನಕಾರರಲ್ಲ ಎಂದು ಪುಸ್ತಕ ಬರೆಯುವ ಮೂಲಕ ಅವರ ಹೆಸರನ್ನು ಹಾಳು ಮಾಡುವಂತ ಪ್ರಯತ್ನ ನಡೆಸಿದ್ದಾರೆ, ಇದು ಅತ್ಯಂತ ಖಂಡನೀಯ ಎಂದು ನುಡಿದರು.
ವಚನಗಳು ಜ್ಞಾನದ ಪೆಪ್ಪರಮೆಂಟ್ ಆಗಿವೆ. ವಚನ ದೀರ್ಘ ಪದ್ಯಗಳಲ್ಲ ಎಂದ ಅವರು ತಮಿಳಿನ ಸಂಗಂನ ಸಾಹಿತ್ಯಕ್ಕೆ ವಚನ ಸಾಹಿತ್ಯವನ್ನು ಮುಂದಿಟ್ಟೆವು. ಉತ್ಕಲಕ್ರಾಂತಿಯು ಸಾಹಿತ್ಯ ಕ್ರಾಂತಿಯಾಗಿ ರೂಪುಗೊಂಡಿತು. ಬಸವಣ್ಣ ಹೇಳುವುದು ವಚನ ಸಾಹಿತ್ಯವಾಗಿದೆ. ಏಸುಕ್ರಿಸ್ತ ಅಹಿಂಸೆಯನ್ನು ಪ್ರತಿಪಾದಿಸಿದರು. ಆದೇ ರೀತಿ ಬಸವಣ್ಣ ಸಹ ಅಹಿಂಸೆ ಪ್ರತಿಪಾದಿಸಿ ವಚನ ಸಾಹಿತ್ಯಕ್ಕೆ ಸಾಕಷ್ಟು ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಹೇಳಿದರು.
ನಾಡೋಜ ದೇಜಗೌರಿಂದ ಉದ್ಘಾಟನೆ:  ಸಮ್ಮೇಳನ ಉದ್ಘಾಟಿಸಿದ ಕರ್ನಾಟಕ ರತ್ನ ನಾಡೋಜ ಡಾ.ದೇ.ಜವರೇಗೌಡ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಇದಕ್ಕೆ ನ್ಯಾಯಾಲಯಗಳು ಕೂಡ ಬಲಿಯಾಗುತ್ತಿವೆ. ನ್ಯಾಯಾಲಯಗಳಲ್ಲಿ ಶೇ.40ರಷ್ಟು ಲಂಚಕೋರರು ಇದ್ದಾರೆ. ನ್ಯಾಯಾಧೀಶರು ಸಹ ಹಣದ ಆಸೆಗೆ ಒಳಗಾಗಿ ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ. ನ್ಯಾಯಾಲಯಗಳು ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ಮುಳುಗುತ್ತಿದೆ ಎಂಬುದನ್ನು ಅರಿಯಬೇಕು. ನ್ಯಾಯಾಲಯಗಳಲ್ಲಿ ನ್ಯಾಯದಾನ ನಿಧಾನವಾಗುತ್ತಿವೆ. ಹಲವಾರು ಪ್ರಕರಣಗಳು ಇತ್ಯರ್ಥವಾಗದೇ 15ರಿಂದ 20 ವರ್ಷಗಳಿಂದ ಪ್ರಕರಣಗಳ ಕಡತು ವಿಲೇವಾರಿ ಆಗದೆ ಹಾಗೆಯೇ ಉಳಿದಿವೆ ಎಂದರು.

ಕೇವಲ ಪ್ರತಿಷ್ಠೆಗಷ್ಟೇ ಸಮ್ಮೇಳನ ಸಲ್ಲದು
78ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ವಚನ ಸಾಹಿತ್ಯ ಸಮ್ಮೇಳನ ಕೇವಲ ಪ್ರತಿಷ್ಠೆಗಷ್ಟೇ ನಡೆದು, ಕೇವಲ ಚರ್ಚೆಗಷ್ಟೇ ಸೀಮತವಾಗಬಾರದು ಎಂದ ಅವರು, ವಚನ ಸಾಹಿತ್ಯ ಪಠ್ಯ ಪುಸ್ತಕಗಳಲ್ಲಿ ಅಳವಡಿಕೆಯಾಗುವ ಮೂಲಕ ಅದನ್ನು ಬೆಳೆಸಲು ಮುಂದಾಗಬೇಕು ಎಂದು ಹೇಳಿದರು.
ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಇದಕ್ಕೆ ನ್ಯಾಯಾಲಯಗಳು ಕೂಡ ಬಲಿಯಾಗುತ್ತಿವೆ. ನ್ಯಾಯಾಲಯಗಳಲ್ಲಿ ಶೇ.40ರಷ್ಟು ಲಂಚಕೋರರು ಇದ್ದಾರೆ. ನ್ಯಾಯಾಧೀಶರು ಸಹ ಹಣದ ಆಸೆಗೆ ಒಳಗಾಗಿ ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ. ನ್ಯಾಯಾಲಯಗಳು ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ಮುಳುಗುತ್ತಿದೆ ಎಂಬುದನ್ನು ಅರಿಯಬೇಕು.
-  ಡಾ.ದೇ.ಜವರೇಗೌಡ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement