ಇಂದು ಚನ್ನಕೇಶವ ರಥೋತ್ಸವ
ಬೇಲೂರು: ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆ ವಿಧಾನಸಭೆ ಚುನಾವಣೆಗೆ ಬಿರುಸಿನ ಪ್ರಚಾರ ನಡೆಯುತ್ತಿರುವುದು ಈ ಬಾರಿಯ ವಿಶೇಷ.
ಒಂದೆಡೆ ಶ್ರೀ ಚನ್ನಕೇಶವಸ್ವಾಮಿ ದಿವ್ಯ ರಥೋತ್ಸವ ಹಾಗೂ ಜಾತ್ರೆಯ ಸಡಗರ ಸಂಭ್ರಮವಾದರೆ, ಇನ್ನೊಂದೆಡೆ ಚುನಾವಣಾ ರಾಜಕೀಯ ಗದ್ದಲ ಹಾಗೂ ಅಭ್ಯರ್ಥಿಗಳ ಮತ ಲೆಕ್ಕಾಚಾರದ ತಲೆಬಿಸಿ ನಡೆದಿದೆ. ಗ್ರಾಮೀಣ ಪ್ರದೇಶ ಜನರಿಗೆ ಜಾತ್ರಾ ಮಹೋತ್ಸವ ಪವಿತ್ರ ಧಾರ್ಮಿಕ ಪದ್ಧತಿಯಾಗಿದ್ದು ಶ್ರದ್ಧೆಯಿಂದ ಪೂಜೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ವರ್ಷಕ್ಕೊಮ್ಮೆ ನಡೆಯುವ ಚನ್ನಕೇಶವಸ್ವಾಮಿ ರಥೋತ್ಸವಕ್ಕೆ ನಾಡಿನ ಮೂಲೆ ಮೂಲೆಯಿಂದ ಸಹಸ್ರಾರು ಮಂದಿ ಭಕ್ತರು ಬರುತ್ತಾರೆ. ಈ ಬಾರಿ ಬ್ರಹ್ಮ ರಥೋತ್ಸವ ಏ. 22 ರ ಸೋಮವಾರ ಬೆಳಿಗ್ಗೆ 10 ರಿಂದ 11 ಗಂಟೆಯೊಳಗೆ ನಡೆಯಲಿದೆ.
ಕಳೆದ ಭಾನುವಾರದಿಂದಲೇ ರಥೋತ್ಸವ ಸಂಬಂದ ಪಟ್ಟಂತೆ ಪೂಜಾ ವಿಧಿವಿಧಾನ ಆರಂಭ ಗೊಂಡಿದೆ. ವಿಜಯನಾಮ ಸಂವತ್ಸರ ಚೈತ್ರ ಶುದ್ಧ ಚೌತಿ ಏ. 14 ರಿಂದ ಆರಂಭಗೊಂಡು ಬಹುಳ ಬಿದಿಗೆ ಏ. 27 ರ ವರೆಗೆ ರಥೋತ್ಸವಾದಿಗಳು ನಡೆಯುತ್ತವೆ.
ಏ. 20 ರ ಶನಿವಾರ ರಾತ್ರಿ ಹನುಮಂತೋತ್ಸವ, ಏ. 21 ರ ಭಾನುವಾರ ರಾತ್ರಿ ಗರುಡೋತ್ಸವ ನಡೆಯುತ್ತದೆ. ಏ. 22 ಸೋಮವಾರ ಬ್ರಹ್ಮ ರಥೋತ್ಸವ ಬೆಳಿಗ್ಗೆ 10 - 40 ರಿಂದ 11 - 10 ರ ಒಳಗೆ ಸಲ್ಲುವ ಮಿಥುನ ಲಗ್ನ ಶುಭಾಂಶದಲ್ಲಿ ನಡೆಯಲಿದೆ. ಏ. 23 ರ ಮಂಗಳವಾರ ಹಗಲು ನಾಡ ರಥೋತ್ಸವ ರಾತ್ರಿ ಡೋಲೋತ್ಸವ ನಡೆಯಲಿದೆ. ಏ. 24 ರಾತ್ರಿ ದ್ವಜಾವರೋಹಣ, ಪೂರ್ಣಾಹುತಿ, ಏ. 25 ರ ಗುರುವಾರ ರಾತ್ರಿ ಸಿಂಹಾರೋಹಣೋತ್ಸವ, ಏ. 26 ಶುಕ್ರವಾರ ದಿವ್ಯ ಮೋಹಿನಿ ಅಲಂಕಾರೋತ್ಸವ, ಹಾಗೂ ಏ. 27 ರ ಶನಿವಾರ ರಾತ್ರಿ ಶಯನೋತ್ಸವ ನಡೆಯಿಲಿದೆ.
ಬ್ಯಾನೆರ್ ಇತ್ಯಾದಿಗೆ ಕಡಿವಾಣ: ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಶುಭಾಶಯ ಕೋರಿ ಫ್ಲಕ್ಸ್, ಹಾಗೂ ಬ್ಯಾನರ್ಗಳನ್ನು ಹಾಕದಂತೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ನಿರ್ಬಂಧ ಹೇರಿದೆ. ರಥ ಚಾಲನೆಗೆ ನಿರಾಳ: ಪ್ರತಿ ಬಾರಿ ರಥೋತ್ಸವ ಸಂದರ್ಭದಲ್ಲಿ ದೇಗುಲ ಮುಂಭಾಗ ಹಾಗೂ ಸುತ್ತಮುತ್ತ ಅಂಗಡಿ ಮುಂಗಟ್ಟು ಹಾಕಲಾಗುತ್ತಿತ್ತು. ಇದರಿಂದ ದೇಗುಲದ ಸುತ್ತಮುತ್ತ ಜಾಗ ಕಿರಿದಾಗಿ ರಥವನ್ನು ಎಳೆಯಲು ಹಾಗೂ ಭಕ್ತರು ಓಡಾಡಲು ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ಪೊಲೀಸ್ ಇಲಾಖೆ ಈ ಬಾರಿ ದೇಗುಲದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ದೇವಾಲಯದಿಂದ 600 ಅಡಿ ಆಚೆ ಅಂದರೆ ವೈಕುಂಠ ಬೀದಿಯಿಂದ ಹರ್ಡಿಕರ್ ಸಕಂಲ್ವರೆಗೆ ಇಡಲು ತಿಳಿಸಿಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ ಬದಲು: ರಥೋತ್ಸವಕ್ಕೆ ಬರುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲ ವಾಗುವಂತೆ ಪಾರ್ಕಿಂಗ್ ವ್ಯವಸ್ಛೆ ಬದಲಾವಣೆ ಮಾಡಲಾಗಿದೆ ಎಂದು ಸಿಪಿಐ ಶ್ರೀಕಾಂತ್ ತಿಳಿಸಿದ್ದಾರೆ. ಹಾಲಿ ಇರುವ ಪಾರ್ಕಿಂಗ್ನ್ನು ಇಲ್ಲಿನ ಸರ್ಕಾರಿ ಕಾಲೇಜು ಮೈದಾನ ಬಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ವಾಹನ ಸಂಚಾರ ದಟ್ಟಣೆ ತಪ್ಪಿಸಲು ಕೆಂಪೇಗೌಡ ವೃತ್ತದಿಂದ ಏಕಮುಖ ಸಂಚಾರ ವ್ಯವಸ್ಥೆ ಕೈಗೊಳ್ಳಲಾಗುವುದು. ಬಂದೋಬಸ್ತ್ ವ್ಯವಸ್ಥೆಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಹಾಗೂ ಚುನಾವಣೆಗೆ ಬಂದಿರುವ ಪ್ಯಾರಾಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ.
ಸ್ನಾನ ಗೃಹ ನಿರ್ಮಾಣ: ರಥೋತಸ್ವಕ್ಕೆ ಆಗಮಿಸುವ ಭಕ್ತರಲ್ಲಿ ಹರಕೆ ಮುಡಿ ಹೊತ್ತವರು ಮುಡಿ ಕೊಟ್ಟ ನಂತರ ಸ್ನಾನ ಮಾಡಲು ಅನುಕೂಲವಾಗುವಂತೆ ಇಲ್ಲಿನ ವಿಷ್ಣುಸಮುದ್ರ ಬಳಿ ಇರುವ ಕಲ್ಯಾಣಿ ಬಳಿ ಸ್ನಾನ ಗೃಹನಿರ್ಮಾಣ ಮಾಡಲಾಗುತ್ತಿದೆ ಎಂದು ದೇಗುಲ ವ್ಯವಸ್ಥಾಪನಾ ಸಮಿತಿಯ ಶ್ರೀಹರಿ, ಸಂತೋಶ್ ತಿಳಿಸಿದರು.
-ಎ.ರಾಘವೇಂದ್ರ ಹೊಳ್ಳ