ಕೆಜೆಪಿಗೆ ಬೆಂಬಲ: ಶಬ್ಬೀರ್ಖಾನ್
ಸಕಲೇಶಪುರ: ಅಲ್ಪಸಂಖ್ಯಾತರ ಹಿತಕಾಯುವ ಭರವಸೆಯಿಂದಾಗಿ ಕರ್ನಾಟಕ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದಾಗಿ ಪುರಸಭೆ ಮಾಜಿ ಉಪಾಧ್ಯಕ್ಷ ಶಬ್ಬೀರ್ಖಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷದ ಅವಧಿಯಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಅಲ್ಪಸಂಖ್ಯಾತರ ರಕ್ಷಣೆಗೆ ನಿಲ್ಲದ ಶಾಸಕ ಎಚ್.ಕೆ ಕುಮಾರಸ್ವಾಮಿರನ್ನು ಸೋಲಿಸುವುದು ನಮ್ಮ ಆದ್ಯತೆಯಾಗಿರುವುದರಿಂದ ಅಲ್ಪಸಂಖ್ಯಾತರ ಮತಗಳು ಹಂಚಿಹೋಗದಂತೆ ತಡೆಯುವ ನಿಟ್ಟಿನಲ್ಲಿ ಹಲವು ಮುಸ್ಲಿಂ ಮುಖಂಡರೊಂದಿಗೆ ಚರ್ಚೆ ನಡೆಸಿ ಕೆಜೆಪಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದರು. ಚುನಾವಣೆ ಸಂದರ್ಬದಲ್ಲಿ ಕ್ಷೇತ್ರಕ್ಕೆ ಆಗಮಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದ ಶೇ 95 ಜನತೆಗೆ ಅಪರಿಚಿತರು. ಆದ್ದರಿಂದ ಅವರಿಗೆ ಬೆಂಬಲ ನೀಡಿದರೆ ಗೆಲುವು ಅಸಾಧ್ಯ ಎಂಬ ನಿಲುವಿಗೆ ಬಂದಿರುವ ನಾವು ಕೆಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿರುವುದಾಗಿ ತಿಳಿಸಿದರು. ಮುಸ್ಲಿಂ ಮುಖಂಡರ ಮೂರು ತಂಡ ರಚಿಸಿಕೊಂಡು ಕ್ಷೇತ್ರದ ಎಲ್ಲೆಡೆ ಪ್ರಚಾರ ನಡೆಸುವ ಮೂಲಕ ಕೆಜೆಪಿ ಅಭ್ಯರ್ಥಿ ಬೆಳಗೋಡು ಉಮೇಶ್ ಪರವಾಗಿ ಪ್ರಚಾರ ನಡೆಸಲಿದ್ದೇವೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಜಾಕೀರ್ ಆಹಮ್ಮದ್, ಹೈದಾರ್, ಆರೀಫ್, ಮಹಮ್ಮದ್ ಜಾನ್, ಸುಲೈಮಾನ್ ಇತರರು ಇದ್ದರು.