ಅಂಗಮಾರಿ: ಸಾಮೂಹಿಕ ಔಷಧಿಗೆ ಮನವಿ
ಹಾಸನ: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಲೂಗಡ್ಡೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಅದರಲ್ಲೂ ತಾಲೂಕಿನ ಕಸಬಾ ಮತ್ತು ಸಾಲಗಾಮೆ ಹೋಬಳಿಗಳಲ್ಲಿ ರೋಗದ ಬಾಧೆ ತೀವ್ರವಾಗಿದೆ. ಆದ್ದರಿಂದ ಎಲ್ಲಾ ಆಲೂ ಬೆಳೆಗಾರರು ಸಾಮೂಹಿಕವಾಗಿ ಔಷಧಿ ಸಿಂಪರಣೆ ಮಾಡುವಂತೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮನವಿ ಮಾಡಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ಆಲೂ ಬೆಳೆಗಾರರಿಗೆ ಆಯಾ ತಾಲೂಕಿನಲ್ಲಿ ಶೇ.50 ರ ಸಹಾಯಧನದಲ್ಲಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ.
ಸಸ್ಯ ಸಂರಕ್ಷಣಾ ಪದ್ಧತಿ: ರೈತರು ಮಾಕ್ಸಿಮೇಟ್ ಔಷಧಿಯನ್ನು 2.5 ಗ್ರಾಂ ಮತ್ತು ಪ್ರತಿ ಲೀಟರಿನಲ್ಲಿ ಮಿಶ್ರಣ ಮಾಡಿ ಎಲೆಯ ಕೆಳಭಾಗ, ಮೇಲಿನ ಭಾಗ ಹಾಗೂ ಕಾಂಡಗಳು ತೊಯ್ಯುವಂತೆ ಸಿಂಪರಣೆ ಮಾಡಬೇಕು. ಮಾಕ್ಸಿಮೇಟ್ ಅಕ್ರೋಬ್ಯಾಟ್ ಔಷಧಿ 6-7 ದಿವಸಗಳ ಅಂತರದಲ್ಲಿ ಒಂದರ ನಂತರ ಒಂದು ಸಿಂಪರಣೆ ಮಾಡುವುದು ಅವಶ್ಯಕ ಎಂದು ತಿಳಿಸಿದ್ದಾರೆ.
ಅಂಗಮಾರಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸೈಮಾಕ್ಸೀನಿಲ್ ಮ್ಯಾಂಕೋಜೆಬ್ಬ್ಮಾಕ್ಸಿಮೇಟ್ 2.5 ಗ್ರಾಂ ಪ್ರತಿ ಲೀ.ನಲ್ಲಿ ಮಿಶ್ರಣ ಮಾಡಿ ಎಲೆಯ ಕೆಳಭಾಗ, ಮೇಲ್ಭಾಗ ಹಾಗೂ ಕಾಂಡಗಳು ತೊಯ್ಯುವಂತೆ ಸಿಂಪರಣೆ ಮಾಡಬೇಕು. ಇಲ್ಲದಿದ್ದಲ್ಲಿ ಅಂಗಮಾರಿ ರೋಗ ಗಡ್ಡೆಗಳಿಗೆ ಹರಡಿ ಬೆಳೆ ನಾಶವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಕಳವು ಹೆಚ್ಚಳ
ಹೊಳೆನರಸೀಪುರ: ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಕಳುವು ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಲೆ ಇದ್ದರೂ ಪೊಲೀಸರ ನಿರ್ಲಕ್ಷ್ಯದಿಂದಾಗಿ ಕಳುವಾದ ಯಾವುದೆ ದ್ವಿಚಕ್ರ ವಾಹನಗಳ ಸುಳಿವು ಮತ್ತು ಬೈಕ್ ಚೋರರ ಪತ್ತೆ ಇದುವರೆಗೂ ದೊರೆತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಇತ್ತೀಚೆಗೆ ಪಟ್ಟಣದಲ್ಲಿನ ನಾನಾ ಸ್ಥಳಗಳಲ್ಲಿ ನಿಲ್ಲಿಸಲಾಗಿದ್ದ ಬೈಕ್ಗಳ ಕಳುವು ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇದ್ದರೂ, ಇದುವರೆಗೂ ಇಲ್ಲಿನ ಅಪರಾಧ ವಿಭಾಗದ ಪೊಲೀಸರ ನಿರ್ಲಕ್ಷತೆಯಿಂದಾಗಿ ಯಾವುದೇ ಪ್ರಯೋಜನವಾಗಿಲ್ಲ.
ಇಲ್ಲಿನ ಗಾಂಧಿ ವೃತ್ತ, ಸುಭಾಷ್ ಚೌಕ, ಪೇಟೆ ಮುಖ್ಯ ರಸ್ತೆ, ಬ್ಯಾಂಕುಗಳ ಮುಂಬಾಗ, ಸಾರ್ವಜನಿಕ ಆಸ್ಪತ್ರೆ ಆವರಣ, ಬಸ್ನಿಲ್ದಾಣ ಮೊದಲಾದ ಸ್ಥಳಗಳಲ್ಲಿ ನಿಲ್ಲಿಸಲಾಗಿದ್ದ ಬೈಕ್ಗಳು ಕಣ್ಮರೆಯಾಗುತ್ತಲೇ ಇವೆ. ಈ ಕುರಿತಂತೆ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಮಾತ್ರ ಇಲ್ಲ.
ಪಟ್ಟಣದ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಬೈಕ್ ಹಾಗೂ ಕಾರುಗಳನ್ನು ಬೇಕಾಬಿಟ್ಟಿ ನಿಲ್ಲಿಸಿದರೂ ಪೊಲೀಸರು ಕ್ರಮ ಜರುಗಿಸಿಲ್ಲ ಎಂಬುದು ಒಂದು ದೂರಾದರೆ, ಅತಿವೇಗದ ವಾಹನ ಚಾಲನೆ ಹಾಗೂ ತ್ರಿಬ್ಬಲ್ ರೈಡಿಂಗ್ ಅಂತೂ ಪಟ್ಟಣದ ವ್ಯಾಪ್ತಿಯಲ್ಲಿ ಸಾಮಾನ್ಯದ ಸಂಗತಿಯಾಗಿದೆ. ಮೇಲಿಂದ ಮೇಲೆ ವಾಹನಗಳ ಕಳವು ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತರಬೇತಿ ಶಿಬಿರ
ಹಾಸನ: ಬ್ಯಾಂಕಿಂಗ್ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಸ್ವರ್ಧಾತ್ಮಕ ಪರೀಕ್ಷೆಗೆ ಪಾಲ್ಗೊಳ್ಳಲು ಪೂರ್ವ ತಯಾರಿಗಾಗಿ ಉಚಿತ ತರಬೇತಿ ನೀಡಲಾಗುತ್ತಿದ್ದು, ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅತೀ ಹೆಚ್ಚು ಬ್ಯಾಂಕ್ ಅಧಿಕಾರಿಗಳ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಆ.18ರಿಂದ 25ವರೆಗೆ ತರಬೇತಿ ನೀಡಲಾಗುತ್ತದೆ. ಪರೀಕ್ಷೆ ಎದುರಿಸುವ ಬಗ್ಗೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯ ಮತ್ತು ವಿಚಾರಗಳನ್ನು ತರಬೇತಿ ವೇಳೆ ತಿಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9742668668, 9449212682, 7204414499 ಮತ್ತು 9844276530 ನ್ನು ಸಂಪರ್ಕಿಸಬಹುದಾಗಿದೆ.