ಆಹಾರ ಉತ್ಪನ್ನ ವಹಿವಾಟು ನೋಂದಣಿ ಕಡ್ಡಾಯ: ಅಪರ ಜಿಲ್ಲಾಧಿಕಾರಿ
ಕ.ಪ್ರ.ವಾರ್ತೆ ಹಾಸನ ಆ.6
ಹಣ್ಣು, ತರಕಾರಿ, ದಿನಸಿ, ಕುಡಿಯುವ ನೀರು, ತಂಪು ಪಾನೀಯ ತಯಾರಕರು, ವಿತರಕರು ಸೇರಿದಂತೆ ಎಲ್ಲರೂ ಎಲ್ಲಾ ರೀತಿಯ ಆಹಾರ ಪದಾರ್ಥಗಳ ವ್ಯಾಪಾರ, ವಹಿವಾಟಿನಲ್ಲಿ ತೊಡಗಿರುವ ಆಹಾರ ಗುಣಮಟ್ಟ ಮತ್ತು ಸಂರಕ್ಷಣೆ ಕಾಯ್ದೆ 2006ರನ್ವಯ ಮುಂದಿನ ಫೆ.4 ರೊಳಗೆ ಕಡ್ಡಾಯವಾಗಿ ನೋಂದಾಯಿಸಿ ಕೊಳ್ಳಬೇಕು. ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನಕ್ಕೆ ಪೂರಕವಾಗಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬರುವ ಫೆಬ್ರವರಿ 4ರೊಳಗೆ ಬೀದಿ ಬದಿ ವ್ಯಾಪಾರಿಗಳೂ ಸೇರಿದಂತೆ ಆಹಾರ ಉತ್ಪನ್ನಗಳ ವಹಿವಾಟು ನಡೆಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ನೊಂದಾಯಿಸಿ ಕೊಳ್ಳಲೇಬೇಕು. ವಾರ್ಷಿಕ 12 ಲಕ್ಷ ರು.ಗೂ ಅಧಿಕ ವಹಿವಾಟು ನಡೆಸುವವರು ಪರವಾನಗಿ ಪಡೆಯಬೇಕು. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಆಹಾರಕ್ಕೆ ಸಂಬಂಧಿಸಿದಂತೆ ಚಾಲ್ತಿಯಲ್ಲಿದ್ದ ಎಲ್ಲಾ ಕಾಯ್ದೆಗಳನ್ನು ಏಕೀಕರಿಸಿ, ಯೋಗ್ಯ ಮತ್ತು ಶುಚಿಯಾದ ಆಹಾರಗಳನ್ನು ಬಳಕೆದಾರರಿಗೆ ಒದಗಿಸುವ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ರೂಪಿಸಲಾಗಿದೆ.
ಅಲ್ಲದೆ ಆಹಾರ ಪದಾರ್ಥಗಳಿಗೆ ಗುಣಮಟ್ಟ ನಿರ್ಧರಿಸಿ, ಅವುಗಳ ತಯಾರಿಕೆ, ದಾಸ್ತಾನು, ಮಾರಾಟ, ಹಂಚಿಕೆ, ಸಾಗಾಣಿಕೆ, ಆಮದು ಮುಂತಾದವುಗಳ ಹಂತಗಳಲ್ಲಿ ನಿಯಂತ್ರಣ ಹೊಂದಿರುತ್ತದೆ. ಈ ಶಾಸನದ ಅಡಿಯಲ್ಲಿ ಎಲ್ಲಾ ಆಹಾರ ಉದ್ಯಮಿ, ವ್ಯಾಪಾರಿಗಳು ನೊಂದಣಿ ಅಥವಾ ಪರವಾನಗಿ ಪಡೆದು ರೂಪಿತ ನಿಯಮ ಮತ್ತು ನಿಬಂಧನೆ ಅನುಸರಿಸಿ ವಹಿವಾಟು ನಡೆಸುವುದು ಕಡ್ಡಾಯ ಎಂದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ ಬಗ್ಗೆ ವ್ಯಾಪಕ ಪ್ರಚಾರ ಆಗತ್ಯವಿದೆ. ಚೇಂಬರ್ ಆಫ್ಕಾಮರ್ಸ್ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಹಕಾರ ಪ್ರಮುಖವಾಗಿದೆ. ಅದೇ ರೀತಿ ಗ್ರಾಮ ಪಂಚಾಯ್ತಿ ಹಂತಗಳಲ್ಲಿ ಪಂಚಾಯ್ತಿ ಅಭಿವೃದ್ಧಿ ಆಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಹೋಂದಣಿ ಪ್ರಕ್ರಿಯೆಯಲ್ಲಿ ನೆರವಾಗಬೇಕು ಎಂದರು.
ಆಹಾರ ಸುರಕ್ಷಣೆ ಮತ್ತು ಗುಣಮಟ್ಟ ಕಾಯ್ದೆ ಜಾರಿಗೆ ಜಿಲ್ಲೆಯಲ್ಲಿ ನೇಮಿಸಲಾಗಿರುವ ಅಂಕಿತ ಅಧಿಕಾರಿಯಾಗಿರುವ ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎನ್.ಎನ್.ರಾಜ್ಗೋಪಾಲ್ ಕಾಯ್ದೆ ಸ್ವರೂಪ, ಉದ್ದೇಶ ನಿಮಯಗಳ ಬಗ್ಗೆ ತಿಳಿಸಿದರು. ಪ್ಯಾಕೇಜ್ ಕುಡಿಯುವ ನೀರಿನ ಘಟಕಗಳು, ಮನೆಯಲ್ಲಿಯೇ ಅಡುಗೆ ಮಾಡಿ ವ್ಯಾಪಾರ ಮಾಡುವವರು (ಮೆಸ್), ಚಿಲ್ಲರೆ ವ್ಯಾಪಾರಿಗಳು, ಟೀ ಅಂಗಡಿಯವರು, ಆಹಾರ ಸಂಸ್ಕರಣಾ ಗಿರಣಿಗಳು, ಧಾರ್ಮಿಕ ಸ್ಥಳಗಳಲ್ಲಿ ಅಂಗಡಿಗಳು, ಊಟದ ಗುತ್ತಿಗೆದಾರರು, ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳು, ಹಾಲು ತಯಾರಕರು ಮತ್ತು ಹಾಲು ವ್ಯಾಪಾರಿಗಳು, ಡಾಬಾಗಳು, ಕ್ಯಾಂಟಿನ್ಗಳು, ವಿದ್ಯಾರ್ಥಿ ನಿಲಯಗಳು, ಕಚೇರಿ ಕ್ಯಾಂಟಿನ್ಗಳು, ಮೀನು, ಕೋಳಿ ಮತ್ತು ಮಾಂಸದ ಅಂಗಡಿಗಳು, ಬಾರ್ಗಳು, ವೈನ್ ಶಾಪ್ ಹಾಗೂ ತಂಪು ಪಾನೀಯ ಮಾರಾಟಗಾರರು, ಹಣ್ಣು ಮತ್ತು ತರಕಾಗಿ ವ್ಯಾಪಾರಿಗಳು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ವ್ಯಾಪಾರ ಮಾಡುವವರು, ಔಷಧಿ ಅಂಗಡಿಗಳು, ಎಲ್ಲಾ ಆಹಾರ ಸಂಬಂಧಿ ಪದಾರ್ಥ ತಯಾರಕರು, ದಾಸ್ತಾನುಗಾರರು, ಮಾರಾಟಗಾರರು ಈ ಕಾಯ್ದೆ ವ್ಯಾಪ್ತಿಗೆ ಬರುವುದಾಗಿ ವಿವರಿಸಿದರು.
ನೋಂದಣಿ ಮತ್ತು ಪರವಾನಗಿ ಶುಲ್ಕದ ವಿವರ: ನೋಂದಣಿ ವಾರ್ಷಿಕ ವಹಿವಾಟು 12 ಲಕ್ಷ ರು. ಒಳಗಡೆ ಇರುವ ಎಲ್ಲಾ ಆಹಾರ ತಯಾರಕರು, ಮಾರಾಟಗಾರರು ವಾರ್ಷಿಕ 100 ರು. ಶುಲ್ಕ ಪಾವತಿಸಿ ನೋಂದಣಿ ಪಡೆಯಬೇಕು. ಆಯಾ ತಾಲೂಕಿನ ಆಹಾರ ಸುರಕ್ಷತಾಧಿಕಾರಿಗಳಲ್ಲಿ ನೋಂದಣಿ ಪ್ರಮಾಣ ಪತ್ರ ಪಡೆಯಬೇಕು. ಅರ್ಜಿ ನೀಡಿದ 7 ದಿನಗಳ ಒಳಗೆ ನೋಂದಣಿ ಪ್ರಮಾಣ ಪತ್ರ ನೀಡಲಾಗುವುದು.
ವಾರ್ಷಿಕ ವಹಿವಾಟು 12 ಲಕ್ಷ ರು. ಮೇಲ್ಪಟ್ಟು ಎಲ್ಲಾ ಆಹಾರ ತಯಾರಕರು, ಮಾರಾಟಗಾರರು ನಿಗಧಿಪಡಿಸಿರುವ ಶುಲ್ಕ ಪಾವತಿಸಿ ಪರವಾನಗಿ ಪಡೆಯಬೇಕು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕಾಯ್ದೆ ಬಗ್ಗೆ ತಾಲೂಕು ಮಟ್ಟದಲ್ಲಿ ಹೆಚ್ಚು ಪ್ರಚಾರ ಅಗತ್ಯ. ಚೇಂಬರ್ ಸಹ ನೋಂದಣಿಗೆ ಸಹಕಾರ ನೀಡಲಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಎಲ್.ಶ್ಯಾಮಲಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚಿದಾನಂದ್, ಶಿಕ್ಷಣ ಇಲಾಖೆ ಅಧಿಕಾರಿ ಪುಟ್ಟಸ್ವಾಮಿ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಕಾಯಿದೆ ಉಲ್ಲಂಘಿಸುವವರಿಗೆ ಶಿಕ್ಷೆ: ಈ ಕಾಯಿದೆ ಅಡಿ ಆಹಾರ ತಯಾರಿಕೆ, ಸಂಗ್ರಹಣೆ, ವಿತರಣೆ, ಮಾರಾಟಗಾರರು ನೋಂದಣಿ ಅಥವಾ ಪರವಾನಗಿ ಮಾಡಿಸದೆ ವ್ಯಾಪಾರ ನಡೆಸುವವರಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 5 ಲಕ್ಷ ರು. ವರೆಗೆ ದಂಡ ವಿಧಿಸಲಾಗುತ್ತದೆ. ಯಾವುದೇ ಆಹಾರ ಪದಾರ್ಥಗಳು ಮಿಸ್ ಬ್ರ್ಯಾಂಡ್ ಆಗಿದ್ದರೆ 3 ಲಕ್ಷದವರೆಗೆ ದಂಡ ವಿಧಿಸಲಾಗುತ್ತಿದೆ.
ಆಹಾರ ಸುರಕ್ಷತಾಧಿಕಾರಿ ಈ ಕಾಯ್ದೆ ಬಗ್ಗೆ ನಿರ್ದೇಶನ ಮಾಡಿದಾಗ ಪಾಲಿಸದಿದ್ದ ಪಕ್ಷದಲ್ಲಿ ಅಂತಹವರೆಗೆ 2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಈ ಕಾಯ್ದೆಯ ಯಾವುದೇ ಸೆಕ್ಷನ್ನಲ್ಲಿ ದಂಡ ವಿಧಿಸಲಾಗಿದ್ದ ಸಂದರ್ಭದಲ್ಲಿ 2 ಲಕ್ಷದವರೆಗೆ ದಂಡ ವಿಧಿಸಬಹುದು.
ಕಲಬೆರಕೆ ಆಹಾರದಿಂದ ಗ್ರಾಹಕರಿಗೆ ತೊಂದರೆ ಉಂಟಾದರೆ ಒಂದು ಲಕ್ಷದವರೆಗೆ ಪರಿಹಾರ, ತೀವ್ರಕರ ಹಾನಿ ಉಂಟಾದರೆ 3 ಲಕ್ಷ ರು. ವರೆಗೆ ಪರಿಹಾರ, ಸಾವು ಸಂಭವಿಸಿದರೆ 5 ಲಕ್ಷ ರು. ವರೆಗೆ ಪರಿಹಾರ ಒದಗಿಸಬೇಕಿದೆ ಎಂದು ತಿಳಿಸಿದರು.