ಇಂದು ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ
ಹೊಳೆನರಸೀಪುರ: ಮೈಸೂರಿನ ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆ ಹಾಗೂ ಅಪೋಲೋ ಬಿಜಿಎಸ್ ಆಸ್ಪತ್ರೆ ಇವರು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸಹಯೋಗದೊಂದಿಗೆ ವಿಶೇಷವಾಗಿ ಬಿಪಿಎಲ್,ಅಕ್ಷಯ ಅನಿಲ ರಹಿತ, ಅಂತ್ಯೋದಯ ಕಾರ್ಡ್ದಾರರಿಗೆ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆ.7ರಂದು ಹಮ್ಮಿಕೊಳ್ಳಲಾಗಿದೆ.
ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿಯಲ್ಲಿ ಉಚಿತವಾಗಿ ಕ್ಯಾನ್ಸರ್ ತಪಾಸಣೆ ನಡೆಸಲಾಗುವುದು. ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಸ್ತನದಲ್ಲಿ ಊತ, ಗಂಟು ಅಥವಾ ಶರೀರದ ಯಾವುದೇ ಭಾಗದಲ್ಲಿ ಗಡಸುತನ, ರಕ್ತಸ್ರಾವ, ಮಲ, ಮೂತ್ರ, ತೊಂಟೆ, ವಾಂತಿ ಇವುಗಳಲ್ಲಿ ರಕ್ತ, ಯೋನಿಯಿಂದ ಅಸ್ವಾಭಾವಿಕ ರಕ್ತ ಸ್ರಾವ, ಒಂದು ತಿಂಗಳ ಮೇಲ್ಪಟ್ಟು ಬಾಯಿ, ಚರ್ಮ ಅಥವಾ ಶರೀರದ ಯಾವುದೇ ಭಾಗದಲ್ಲಿ ಗಾಯ ಅಥವಾ ವಾಸಿಯಾಗದೆ ಇರುವ ಹುಣ್ಣು, ನುಂಗುವಾಗಿನ ತೊಂದರೆ ಅಥವಾ ತಡೆತ, ಗಂಟಲಲ್ಲಿ ಉರಿತ, ನೋವು ಅಥವಾ ಧ್ವನಿ ಬದಲಾವಣೆ, ಒಂದು ತಿಂಗಳ ಮೇಲ್ಪಟ್ಟು ಇದ್ದಲ್ಲಿ ಈ ಉಚಿತ ಶಿಬಿರದಲ್ಲಿ ಪಾಲ್ಗೊಂಡು ತಜ್ಞ ವೈದ್ಯರುಗಳಿಂದ ಪರೀಕ್ಷಿಸಿಕೊಳ್ಳುವಂತೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಸಂಪರ್ಕಾಧಿಕಾರಿ ನಿಶಾಂತ್ ಅವರುಕೋರಿದ್ದಾರೆ.
ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಔಷಧ, ಊಟ, ಚಿಕಿತ್ಸೆಯ ನಂತರ ಪ್ರಯಾಣ ಭತ್ಯೆಯನ್ನು ಮರುಪಾವತಿ ಮಾಡಲಾಗುವುದು, ಈ ಎಲ್ಲಾ ಖರ್ಚು ಸರ್ಕಾರವೇ ಭರಿಸಲಿದೆ. ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳ ಬಯಸುವವರು ಬಿಪಿಎಲ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ತರಬೇಕು ಶಿಬಿರ ಆ.7ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ.