ಉಪನ್ಯಾಸಕ ವಜಾ ವಿರುದ್ಧ ಧರಣಿ
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ಆ.6
ಅರೆಕಾಲಿಕ ಉಪನ್ಯಾಸಕರೊಬ್ಬರನ್ನು ಕರ್ತವ್ಯದಿಂದ ತೆಗೆದುಹಾಕಿರುವ ವಿದ್ಯಾ ಸಂಸ್ಥೆ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿ ನಂತರ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.
ಪಟ್ಟಣದ ನವೋದಯ ವಿದ್ಯಾ ಸಂಸ್ಥೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಆಡಳಿತ ಮಂಡಳಿ ನೇಮಕ ಮಾಡಿಕೊಂಡಿದ್ದ ಉಪನ್ಯಾಸಕ ಗೋಪಾಲಕೃಷ್ಣ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಕಾಲೇಜು ಬಹಿಷ್ಕರಿಸಿ ಕಾಲೇಜಿನಿಂದ ಬಿ.ಎಂ ರಸ್ತೆಯಲ್ಲಿ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿಗೆ ಆಗಮಿಸಿ ಶಿರಸ್ತೇದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳ ಧರಣಿಗೆ ಕೈಜೋಡಿಸಿದರು. ಉಪನ್ಯಾಸಕ ಗೋಪಾಲಕೃಷ್ಣ ಅವರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಆಡಳಿತ ಮಂಡಳಿ ತಮ್ಮ ಪರವಾಗಿರುವವರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಹಿಂದಿನಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದವರ ಮೇಲೆ ಬರೆ ಎಳೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಗೋಪಾಲಕೃಷ್ಣ ಅವರನ್ನು ಮುಂದುವರಿಸಬೇಕೆಂದು ಆಗ್ರಹಿಸಿದರು.