ಎವರ್ಗ್ರೀನ್ ಮೂವ್ಮೆಂಟ್ ಸೊಸೈಟಿ ಉದ್ಘಾಟನೆ
ಚನ್ನರಾಯಪಟ್ಟಣ: ಉನ್ನತ ವ್ಯಾಸಂಗ ಮಾಡಿದ ವಿದ್ಯಾವಂತರು ದೇಶದಲ್ಲಿದ್ದಾರೆ, ಆದರೆ ಪ್ರಜ್ಞಾವಂತರಿಲ್ಲದೆ ದೇಶ ಕೊರಗುತ್ತಿದೆ ಎಂದು ವಿಚಾರವಾದಿ ಹುಲಿಕಲ್ ನಟರಾಜು ತಿಳಿಸಿದರು.
ಪಟ್ಟಣದಲ್ಲಿ ಎವರ್ಗ್ರೀನ್ ಮೂವ್ಮೆಂಟ್ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಡೋಂಗಿ ಸ್ವಾಮೀಜಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನಿಜವಾದ ಸ್ವಾಮೀಜಿಗಳಿಗೆ ಬೆಲೆ ಇಲ್ಲದಾಗಿದೆ. ಡೋಂಗಿ ಸ್ವಾಮೀಜಿಗಳಿಗೆ ಬುದ್ದಿ ಕಲಿಸಬೇಕಾಗಿದೆ ಎಂದರು. ಕತ್ತರಿಘಟ್ಟ ಮೇಳಿಯಮ್ಮ ಆಧ್ಯಾತ್ಮ ಕೇಂದ್ರದ ಚಂದ್ರಶೇಖರ ಗುರೂಜಿ, ಮಂಗಳೂರಿನ ಅಬ್ದುಲ್ ರಶೀದ್, ಆಲ್ಪಾನ್ಸ್ ನಗರದ ಫಾ. ಡಿಸೋಜ, ಬೆಂಗಳೂರಿನ ಬೌದ್ಧ ಉಪಾಸಕ ಆಯುಷ್ಮೆನ್, ಗೊಮ್ಮಟವಾಣಿ ಸಂಪಾದಕ ಎಸ್.ಎನ್. ಅಶೋಕ್ಕುಮಾರ್, ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಕೆಂಪೇಗೌಡ ವೇದಿಕೆ ಅಧ್ಯಕ್ಷ ಕಾಳೇನಹಳ್ಳಿ ಆನಂದ್ ಇದ್ದರು. ಎವರ್ಗ್ರೀನ್ ಸೊಸೈಟಿ ಅಧ್ಯಕ್ಷ ಪುಟ್ಟಸ್ವಾಮಿಗೌಡ ಅಧ್ಯಕ್ಷತೆ ವಹಿಸಿದ್ದರು.
ಇಂದು ಸಿಪಿಐಎಂ ಪ್ರತಿಭಟನಾ ಪ್ರದರ್ಶನ
ಹಾಸನ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ನಿರಂತರವಾಗಿ ಸಿಪಿಐಎಂ ಕಾರ್ಯಕರ್ತರ ಮೇಲೆ ದಾಳಿ ನಡೆಸುವುದರ ಜತೆಗೆ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ. ಪ್ರಜಾಪ್ರಭುತ್ವ ಉಳಿಸುವ ದೃಷ್ಟಿಯಿಂದ ಭಾರತ ಕಮ್ಮುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐಎಂ ಕೇಂದ್ರ ಸಮಿತಿ ಆಗಸ್ಟ್ 7 ರಂದು ದೇಶಾದ್ಯಂತ ಪ್ರತಿಭಟಿಸಲು ಕರೆ ನೀಡಿದೆ. ಇದರ ಅಂಗವಾಗಿ ಹೇಮಾವತಿ ಪ್ರತಿಮೆ ಬಳಿ ಬೆಳಗ್ಗೆ 11ಕ್ಕೆ ಪ್ರತಿಭಟನೆ ನಡೆಸಲಿದೆ ಎಂದು ಸಿಐಟಿಯು ಕಾರ್ಯದರ್ಶಿ ವಿ.ಸುಕುಮಾರ್ ತಿಳಿಸಿದ್ದಾರೆ.