ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 28ರಷ್ಟು ಅಧಿಕ ಮಳೆ
ಕ.ಪ್ರ.ವಾರ್ತೆ ಹಾಸನ ಆ.6
ಜಿಲ್ಲೆಯಲ್ಲಿ ಈ ವರ್ಷ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಸರಾಸರಿ ವಾಡಿಕೆ ಮಳೆಗಿಂತ ಶೇಕಡ 28ರಷ್ಟು ಅಧಿಕ ಮಳೆ ಸುರಿದಿದೆ. ಆದರೆ ಅರಸೀಕೆರೆ ಮತ್ತು ಬೇಲೂರು ತಾಲೂಕಿನ ಕೆಲವಡೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವರಾಜ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜುಲೈ 31ರವರೆಗೆ ವಾಡಿಕೆ ಮಳೆ 567.9 ಮಿ.ಮೀ. ಈ ವರ್ಷ ಈ ಅವಧಿಯಲ್ಲಿ 727 ಮಿ.ಮೀ.ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 353.8 ಮಿ.ಮೀ. ನಷ್ಟು ವಾಡಿಕೆ ಮಳೆಯಲ್ಲಿ ಶೇಕಡ 62ರಷ್ಟು ಮಳೆಯಾಗಿ ಶೇಕಡ 38ರಷ್ಟು ಕೊರತೆ ಎದುರಾಗಿತ್ತು ಎಂದು ಹೇಳಿದ್ದಾರೆ.
ಜುಲೈ ವರೆಗಿನ ಮಾಸಿಕ ಸರಾಸರಿ ವಾಡಿಕೆ ಮಳೆ ಪ್ರಮಾಣ: ಜನವರಿಯಲ್ಲಿ 0.3 ಮಿ.ಮೀ. (ವಾಡಿಕೆ - 1.77), ಫೆಬ್ರವರಿಯಲ್ಲಿ 17.4. ಮಿ.ಮೀ. (ವಾಡಿಕೆ - 2.60), ಮಾರ್ಚ್ನಲ್ಲಿ 31.8 ಮಿಮೀ. (ವಾಡಿಕೆ - 10.8), ಏಪ್ರಿಲ್ನಲ್ಲಿ 29.9 ಮಿ.ಮೀ. (ವಾಡಿಕೆ 55.5) ಮಳೆಯಾಗಿದೆ. ಮೇ ತಿಂಗಳಲ್ಲಿ 92.3 ಮಿ.ಮೀ. (ವಾಡಿಕೆ 104.9), ಜೂನ್ ತಿಂಗಳಲ್ಲಿ 217.9 ಮಿ.ಮೀ. (ವಾಡಿಕೆ 152.1), ಜುಲೈನಲ್ಲಿ 335.4 ಮಿ.ಮೀ. (ವಾಡಿಕೆ 240.9) ಮಳೆಯಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ವಾಡಿಕೆಗಿಂತ ಅಧಿಕ ಮಳೆಯಾದರೂ ಅರಸೀಕೆರೆ ತಾಲೂಕಿನ ಕಸಬಾ-13, ಬಾಣಾವರ -6, ಗಂಡಸಿ -28, ಜಾವಗಲ್ -13, ಹಾಗೂ ಬೇಲೂರು ತಾಲೂಕಿನ ಹಳೇಬೀಡು -37, ಮಾದೀಹಳ್ಳಿ -13, ಹಾಸನ ತಾ. ದುದ್ದ ಹೋಬಳಿಯಲ್ಲಿ -13ರಷ್ಟು ಮಳೆ ಕೊರತೆಯಾಗಿದೆ.
ಜಿಲ್ಲೆಯಲ್ಲಿ 255000 ಹೆಕ್ಟೇರ್ ಬಿತ್ತನೆ ಗುರಿಹೊಂದಿದ್ದು ಇದುವರೆಗೆ 125795 ಹೆ. (49) ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಏಕದಳ ಧಾನ್ಯ ಬೆಳೆಗಳಾದ ಮುಸುಕಿನಜೋಳ, ಹೈ.ಜೋಳ, ಸೇರಿದಂತೆ 83895 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ದ್ವಿದಳ ಧಾನ್ಯ ಬೆಳೆಗಳಾದ ಹೆಸರು, ಉದ್ದು, ಅಲಸಂದೆ ಸೇರಿದಂತೆ 21200 ಹೆ.ನಲ್ಲಿ ಬಿತ್ತನೆಯಾಗಿದೆ.
ಎಣ್ಣೆಕಾಳು ಬೆಳೆಗಳಾದ ಎಳ್ಳು, ನೆಲಗಡಲೆ, ಹರಳು ಸೇರಿದಂತೆ 4150 ಹೆ.ನಲ್ಲಿ ಬಿತ್ತನೆಯಾಗಿದೆ ವಾಣಿಜ್ಯ ಬೆಳೆಗಳು (ತಂಬಾಕು ಸೇರಿದಂತೆ) 16550 ಹೆ. ನಷ್ಟು ನಾಟಿಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 49 ರಷ್ಟು ಬಿತ್ತನೆಕಾರ್ಯ ಪೂರ್ಣಗೊಂಡಿದೆ. ಕಳೆದ ವರ್ಷ ಇದೇ ಅವಧಿಗೆ 90750 ಹೆ.ನಲ್ಲಿ (36) ಬಿತ್ತನೆಯಾಗಿತ್ತು ಎಂದು ತಿಳಿಸಿದ್ದಾರೆ.
ಬಿತ್ತನೆ ಬೀಜಗಳಿಗೆ ಸಂಬಂಧಿಸಿದಂತೆ, ಜಿಲ್ಲೆಗೆ ಸುಮಾರು 26333 ಕ್ವಿಂ. ಬಿತ್ತನೆ ಬೀಜದ ಬೇಡಿಕೆ ಇದ್ದು ಇದುವರೆಗೆ 12273 ಕ್ವಿಂ. ಬಿತ್ತನೆ ಬೀಜಗಳನ್ನು 84445 ಮಂದಿ ರೈತರಿಗೆ ವಿತರಿಸಲಾಗಿದೆ. ಹಾಗೂ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 1871 ಕ್ವಿಂ. ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಮತ್ತು ಖಾಸಗಿ ಬಿತ್ತನೆ ಮಾರಾಟಗಾರರಲ್ಲಿ ಒಟ್ಟು 2962 ಕ್ವಿಂ. ಬಿತ್ತನೆ ಬೀಜ ಸಂಗ್ರಹಿಸಲಾಗಿದೆ. ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ ಎಂದು ಹೇಳಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗಾಗಿ 111070 ಮೆ.ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಅದರಲ್ಲಿ ಜಿಲ್ಲೆಗೆ ಈವರೆಗೆ 81227 ಮೆ.ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ರಾಜ್ಯ ಮಾರಾಟ ಮಹಾ ಮಂಡಳದಲ್ಲಿ 14370 ಮೆ.ಟನ್ ಹಾಲಿ ದಾಸ್ತಾನಿರುತ್ತದೆ. ರಸಗೊಬ್ಬರಕ್ಕೆ ಯಾವುದೇ ರೀತಿಯ ಕೊರತೆ ಉಂಟಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.