ತೆಂಗು ಜತೆಗೆ ಅಂತರ ಬೆಳೆ ಬೆಳೆಯಲು ಸಲಹೆ
ಹಾಸನ: ರೈತರು ಕೇವಲ ತೆಂಗು ಬೆಳೆಯ ಮೇಲೆ ಅವಲಂಬಿತರಾಗದೇ ಅದರ ಜೊತೆ ಅಂತರ ಬೆಳೆಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ನಟರಾಜ್ ಸಲಹೆ ನೀಡಿದ್ದಾರೆ. ಅವರು ಕಂದಲಿಯಲ್ಲಿ ಏರ್ಪಡಿಸಿದ್ದ ಯುವ ರೈತರಿಗೆ ತೆಂಗಿನ ಮರ ಹತ್ತುವ ಮತ್ತು ಸಸ್ಯ ಸಂರಕ್ಷಣೆಯ ಬಗ್ಗೆ ಆರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೆಂಗಿನ ಮರದಿಂದ ಆಗುವ ಉಪಯೋಗ ಅನೇಕ. ತೆಂಗಿನ ಮರದಿಂದ ಆಹಾರ, ಪಾನೀಯ, ಇಂಧನಕ್ಕೆ ಸೌದೆ ವಸತಿಗೆ ಮತ್ತು ಅನೇಕ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ ಎಂದು ವಿವರಿಸಿದರು. ಕೇಂದ್ರದ ವಿಜ್ಞಾನಿ ಡಾ.ಆರ್. ವಿನಯ್ಕುಮಾರ್ ಶಿಬಿರಾರ್ಥಿಗಳು ತೆಂಗಿನ ಮರ ಹತ್ತುವ ಸಾಧನದ ಮೂಲಕ ಮರ ಹತ್ತುವುದನ್ನು ಕಲಿತು ಹಳ್ಳಿಗಳಲ್ಲಿ ಮರ ಹತ್ತುವವರು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಉಪಕಸುಬಾಗಿ ತೆಗೆದುಕೊಳ್ಳಬಹುದು ಎಂದರು.