ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ: ಚಂದ್ರೇಗೌಡ
ಕನ್ನಡಪ್ರಭ ವಾರ್ತೆ ಹಾಸನ ಆ. 6
ಕ್ರೀಡೆ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸಲು ಸಹಕಾರ ಆಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಡಿ.ಚಂದ್ರೇಗೌಡ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಸನ್ಯಾಸಿಹಳ್ಳಿ ಗ್ರಾಮ ಪಂಚಾಯ್ತಿ ಸಂಯುಕ್ತವಾಗಿ ಹೊಸಉತ್ಪಾತನಹಳ್ಳಿಯಲ್ಲಿ ಏರ್ಪಡಿಸಿದ್ದ ಹಿರಿಯ ಪ್ರಾಥಮಿಕ ಶಾಲೆಯ ಕ್ಲಸ್ಟರ್ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಕೇಂದ್ರದಲ್ಲಿ ಕ್ರೀಡಾಕೂಟ ನಡೆಸುವ ಉದ್ದೇಶವಿತ್ತು ಆದರೂ ಗ್ರಾಮಸ್ಥರು ಹೆಚ್ಚು ಸಹಕಾರ ನೀಡಿ ನಡೆಸುತ್ತಿದ್ದಾರೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಅಧೀಕ್ಷಕ ರಂಗಸ್ವಾಮಿ ಮಾತನಾಡಿ, ಈ ಶಾಲೆಯಲ್ಲಿ ಮೈದಾನದ ಕೊರತೆ ಇದ್ದರೂ ಜವಾಬ್ದಾರಿ ತೆಗೆದುಕೊಂಡು ಕ್ರೀಡಾಕೂಟ ನಡೆಸುತ್ತಿರುವುದು ಸಂತಸ ತಂದಿದೆ. ಬಿ.ಡಿ.ಚಂದ್ರೇಗೌಡರು ಜಿ.ಪಂ.ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಲಾ 1 ಲಕ್ಷ ರು.ನಂತೆ 20 ಲಕ್ಷ ರು. ಅನುದಾನವನ್ನ ಕ್ರೀಡಾ ಉಪಕರಣ, ಮೈದಾನ ಸಮತಟ್ಟು ಇದಕ್ಕೆ ನೀಡಿರುವುದನ್ನು ಸ್ಮರಿಸಿಕೊಂಡರು. ಪ್ರತಿಭೆ ಹೊರಹೊಮ್ಮಲು ಇಂತಹ ಅವಕಾಶ ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಗ್ರಾ.ಪಂ.ಅಧ್ಯಕ್ಷೆ ಲತಾಮೋಹನ್ ಮಾತನಾಡಿ, ಕ್ರೀಡೆ ಜತೆ ಓದಿನ ಕಡೆಗೂ ಗಮನ ನೀಡಬೇಕು. ಸರಕಾರ ಕ್ರೀಡೆಗೆ ಹೆಚ್ಚು ಗಮನ ಹರಿಸಬೇಕಿದೆ ಎಂದರು. ಎಸ್ಡಿಎಂಸಿ ಅಧ್ಯಕ್ಷೆ ವೀಣಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕಿ ಗೀತಾ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೊಮಾರಯ್ಯ, ಶಿಕ್ಷಕ ಗೌಡೇಗೌಡ, ಮು.ಶಿ.ಯಶೋಧ ಇದ್ದರು.