ಮುಸುಕಿನ ಜೋಳಕ್ಕೆ ಬೆಂಕಿ ರೋಗ: ತತ್ತರ
ಕನ್ನಡಪ್ರಭ ವಾರ್ತೆ ಬೇಲೂರು ಆ.6
ಜಿಲ್ಲಾ ವಾಣಿಜ್ಯ ಆಲೂ ಬೆಳೆಗೆ ಸತತ ಮಳೆಯಿಂದ ಅಂಗಮಾರಿ ರೋಗದಿಂದ ಬೆಳೆ ಕಳೆಕೊಂಡ ರೈತರಿಗೆ ಮುಸುಕಿನ ಜೋಳವಾದರೂ ಲಾಭ ತರಬಹುದು ಎಂಬ ರೈತನ ಕನಸು ಇದೀಗ ನುಚ್ಚು ನೂರಾಗಿದೆ.
ಕಾರಣ ತಾಲೂಕಿನ ಕೆಲ ಭಾಗದಲ್ಲಿ ಮುಸುಕಿನ ಜೋಳಕ್ಕೆ ಬೆಂಕಿರೋಗ ಎಂಬ ಭಯಾನಕ ಮಹಾಮಾರಿ ರೋಗ ಅವರಿಸಿಕೊಂಡು ರೈತ ಬಾಳು ಮೂರಾಬಟ್ಟೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಮುಸುಕಿನ ಜೋಳವನ್ನು ಹೆಚ್ಚಾಗಿ ಬಿತ್ತನೆ ಮಾಡಿದ್ದು, ಮುಂಗಾರು ಹಂಗಾಮು ಉತ್ತಮವಾದ ಕಾರಣ ರೈತರು ಮುಸುಕಿನ ಜೋಳ ಹೆಚ್ಚು ಬಿತ್ತನೆ ಮಾಡಿದ್ದರು. ಸದ್ಯ ಮುಸುಕಿನ ಜೋಳ ಫಸಲು ಕಟ್ಟುವ ಸಂದರ್ಭಕ್ಕೆ ಸರಿಯಾಗಿ ಬೆಂಕಿ ರೋಗ ಬಂದ ಕಾರಣ ರೈತರಿಗೆ ದಿಕ್ಕು ಕಾಣದಂತಾಗಿದೆ.
ರೈತರು ಖಾಸಗಿ ಸಂಸ್ಥೆಗಳ ನಾನಾ ತಳಿಗಳನ್ನು ರೈತ ಸಂಪರ್ಕ ಕೇಂದ್ರದಿಂದ ಖರೀದಿ ಮಾಡಿದ್ದು, ಇನ್ನು ಕೆಲವರು ಖಾಸಗಿ ಅಂಗಡಿಗಳ ಮೂಲಕ ಬಿತ್ತನೆ ಬೀಜಗಳನ್ನು ಖರೀದಿ ಮಾಡಿದ್ದಾರೆ.
ಆದರೆ ಕೆಲ ಖಾಸಗಿ ಕಂಪನಿಗಳ ಜೋಳಕ್ಕೆ ಈ ರೋಗ ಅವರಿಸಿದ್ದು, ಹೆಚ್ಚಿನಂಶ ಕಳಪೆ ಬೀಜದ ಲಕ್ಷಣ ಎಂದು ಹೇಳಲಾಗುತ್ತದೆ.
ಆದರೆ ಇದೇ ಕಂಪನಿ ಜೋಳ ಬೇರೆ ಪ್ರದೇಶದಲ್ಲಿ ರೋಗ ಬಂದಿಲ್ಲದ ಕಾರಣ ಯಾರಿಗೆ ದೂರು ನೀಡುವುದು ಎಂದು ರೈತರು ಚಿಂತಾಜನಕರಾಗಿದ್ದಾರೆ.
ಹಲವು ರೈತರು ಹೇಳುವಂತೆ ಈ ರೋಗ ಸತತ ಎರಡು ತಿಂಗಳಿಂದ ಎಡ ಬಿಡದೆ ಸುರಿದ ಮಳೆದಿಂದ ಶೀತಗಟ್ಟಿ ರೋಗ ಅವರಿಸಿದೆ ಹಾಗೂ ಮರಳು ಮಣ್ಣು ಹೊಲದಲ್ಲಿ ರೋಗ ಕಾಣಿಸಿಕೊಂಡಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಔಷಧಿ ಬಗ್ಗೆ ಮಾಹಿತಿ ನೀಡಬೇಕಾಗಿದೆ ಎಂದು ರೈತರು ಹೇಳುತ್ತಾರೆ.