ರಾಜಿ ಪಂಚಾಯಿತಿ ಮಧ್ಯವರ್ತಿಗಳ ವಿರುದ್ಧ ಕ್ರಮ
ಚನ್ನರಾಯಪಟ್ಟಣ: ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ಅಥವಾ ಮಧ್ಯವರ್ತಿಗಳನ್ನು ಮುಂದಿಟ್ಟುಕೊಂಡು ರಾಜಿ ಪಂಚಾಯಿತಿ ಮಾಡಿಸುವುದು ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ ಚನ್ನಣ್ಣನವರ್ ತಿಳಿಸಿದರು.
ಪಟ್ಟಣದ ಶಿವಜ್ಯೋತಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಠಾಣೆಯಲ್ಲಿ ತಮ್ಮ ಇಲಾಖೆಯವರೆ ರಾಜಿ ಪಂಚಾಯಿತಿ ಮಾಡಿಸುವ ಹವ್ಯಾಸ ಬೆಳಿಸಿಕೊಂಡರೆ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಠಾಣೆಗೆ ದೂರು ಬಂದರೆ ಅದು ಮೊದಲು ಎಪ್ಐಆರ್ ನಂತರದಲ್ಲಿ ಮುಂದಿನ ಕ್ರಮ ಎಂದು ನೇರವಾಗಿ ನುಡಿದರು.
ಗಂಡ ಹೆಂಡತಿಯರ ಮಧ್ಯೆ ವಿರಸದ ದೂರು ಹೊರತುಪಡಿಸಿ ಬೇರೆ ದೂರುಗಳನ್ನು ಮಧ್ಯಸ್ಥರೊಂದಿಗೆ ಸೇರಿ ರಾಜಿ ಮಾಡಿಸುವುದು ಅದರಿಂದ ಯಾವುದೋ ಆಸೆಯನ್ನು ನಿರೀಕ್ಷಿಸುವುದು, ಇದರಲ್ಲಿ ತಮ್ಮ ಇಲಾಖೆಯವರು ಸೇರಿರುವುದು ಸಾಬೀತಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ತಾಲೂಕಿನಲ್ಲಿ ಅನಧಿಕೃತ ಮದ್ಯದಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂಬ ದೂರುಗಳು ಬಂದಿದ್ದು, ಅವುಗಳನ್ನು ತಡೆಯಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾದಾಗ ಅವರನ್ನು ಬಿಡಿಸಲು ಕೆಲವರು ಮುಂದಾಗುತ್ತಾರೆ. ಎಲ್ಲಿಯವರಗೆ ಅನ್ಯಾಯ ಮಾಡುವವರಿಗೆ ಸಹಕಾರ ನೀಡುತ್ತೀರೋ ಅಲ್ಲಿಯವರಗೆ ನ್ಯಾಯ ದೊರಕಿಸುವುದು ಕಷ್ಟವಾಗುತ್ತದೆ ಎಂದರು.
ಪಟ್ಟಣದಲ್ಲಿ ಬಡ್ಡಿ, ಬೆಟ್ಟಿಂಗ್ ಹಾಗೂ ಫೈನಾನ್ಸ್ ದಂಧೆ ನಡೆಯುತ್ತಿರುವ ಬಗ್ಗೆ ತಿಳಿದುಬಂದಿದ್ದು, ನಿಖರ ಮಾಹಿತಿಯನ್ನು ಯಾರು ಬೇಕಾದರೂ ನೀಡಬಹುದು, ಅವರ ಹೆಸರನ್ನು ಬಹಿರಂಗ ಪಡಿಸದೆ ದಂಧೆ ನಡೆಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದಲ್ಲಿ ಫೈನಾನ್ಸ್ಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿದ್ದು, ಅವುಗಳು ವ್ಯವಹಾರದ ಮೇಲೆ ನಿಗಾ ಇಡಬೇಕೆಂದು ಹಾಗೂ ರಾತ್ರಿ ಕಳ್ಳತನ, ವಿದ್ಯಾರ್ಥಿನಿಯರಿಗೆ ರಕ್ಷಣೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕೆಂದು ಸಾರ್ವಜನಿಕರು ಸಭೆಯಲ್ಲಿ ಆಗ್ರಹಿಸಿದರು.