ಹಾಸ್ಟೆಲ್ ಅವ್ಯವಸ್ಥೆ: ಸಿಡಿದೆದ್ದ ವಿದ್ಯಾರ್ಥಿನಿಯರು
ಕ.ಪ್ರ.ವಾರ್ತೆ ಹಾಸನ ಆ. 6
ಗುಣಮಟ್ಟದ ಆಹಾರ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವಂತೆ ಮೆಟ್ರಿಕ್ ನಂತರದ ಬಾಲಕಿಯರ ಸರ್ಕಾರಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ಮಂಗಳವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಹಾಸ್ಟೆಲ್ನ ಅವ್ಯವಸ್ಥೆ ಹಾಗೂ ಕಳಪೆ ಗುಣಮಟ್ಟದ ಆಹಾರ ನೀಡುವುದನ್ನು ಖಂಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು.
ಹಾಸ್ಟೆಲ್ನಲ್ಲಿ ಕಳೆದ ಕೆಲವು ದಿನಗಳಿಂದ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಹಾಸ್ಟೆಲ್ನಲ್ಲಿ ಕಸ, ಕಡ್ಡಿ ಹಾಗೂ ಹುಳಗಳು ಇರುವ ಆಹಾರ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿನಿಯರ ಆರೋಗ್ಯ ಹದಗೆಡುತ್ತಿದ್ದು, ನಮ್ಮ ಸಮಸ್ಯೆಗಳನ್ನು ಆಲಿಸುವವರು ಯಾರೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಪ್ರತಿನಿತ್ಯ ಕಳಪೆ ಆಹಾರ ನೀಡಲಾಗುತ್ತಿರುವ ಬಗ್ಗೆ ಪ್ರಶ್ನೆ ಮಾಡಿದರೆ ಅಡುಗೆಯವರು ಹಾಗೂ ಹಾಸ್ಟೆಲ್ ವಾರ್ಡನ್ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಸರ್ಕಾರದಿಂದ ಹಣ ಬರುತ್ತಿದ್ದರೂ ಸರಿಯಾಗಿ ಆಹಾರ ನೀಡುತ್ತಿಲ್ಲ. ಗುಣಮಟ್ಟದ ಆಹಾರ ನೀಡದ ಕಾರಣ ವಿದ್ಯಾರ್ಥಿನಿಯರು ಯಾರೂ ಸರಿಯಾಗಿ ಆಹಾರ ಸೇವಿಸುತ್ತಿಲ್ಲ ಎಂದು ಅಲವತ್ತುಕೊಂಡರು.
ಆಡುಗೆಯವರು ಸರಿಯಾಗಿ ಆಹಾರ ಸಿದ್ದಪಡಿಸುತ್ತಿಲ್ಲ. ಬೇಕಾಬಿಟ್ಟಿಯಿಂದ ಆಹಾರ ಸಿದ್ದಪಡಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಆಹಾರದಲ್ಲಿ ಯಾವುದೇ ರೀತಿಯ ಶುಚಿತ್ವ ಕಾಪಾಡುತ್ತಿಲ್ಲ. ಇದರಿಂದ ಹಲವಾರು ರೋಗರುಜಿನಕ್ಕೆ ಎಡೆಯಾಗುತ್ತಿದೆ. ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳ ಆರೋಗ್ಯ ಹಾಳಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ತಿಂಗಳ ಹಿಂದಷ್ಟೆ ಬಯೋವುಟ್ರಿಕ್ ವ್ಯವಸ್ಥೆಯನ್ನು ಹಾಸ್ಟೆಲ್ನಲ್ಲಿ ಅಳವಡಿಸಲಾಗಿದೆ. ಗುಣಮಟ್ಟದ ಆಹಾರ ನೀಡುವಲ್ಲಿ ವಾರ್ಡನ್ ವಿಫಲರಾಗಿದ್ದಾರೆ. ವಾರ್ಡನ್ ತಮಗೆ ಬೇಕಾದಾಗ ಹಾಸ್ಟೆಲ್ಗೆ ಬಂದು ಹೋಗುತ್ತಾರೆ. ಅವರು ಹಾಸ್ಟೆಲ್ನಲ್ಲಿ ಹೆಚ್ಚಿನ ಸಮಯ ಇರದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.
ಹಾಸ್ಟೆಲ್ನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಮೇಲಿನ ಅಂತಸ್ಥಿನಲ್ಲಿ ಇರುವ ಕೋಠಡಿಗಳು ತುಂಬಾ ಹಾಳಾಗಿವೆ. ಈ ಬಗ್ಗೆ ಹಲವು ಬಾರಿ ವಾರ್ಡನ್ ಗಮನಕ್ಕೆ ತಂದಿದ್ದರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸ್ವಚ್ಚತೆಯ ಅಭಾವ ಹಾಸ್ಟೆಲ್ನಲ್ಲಿ ಹೆಚ್ಚಾಗಿರುವುದರಿಂದ ಇಲ್ಲಿನ ಪರಿಸರ ಹದಗೆಟ್ಟಿದೆ ಎಂದು ಆರೋಪಿಸಿದರು.
ಅಷ್ಟೇ ಅಲ್ಲದೆ ಹಾಸ್ಟೆಲ್ನ ಸ್ನಾನದ ಕೊಠಡಿಗಳ ಕಿಟಕಿಗಳಿಗೆ ಸರಿಯಾದ ಬಾಗಿಲುಗಳು ಇಲ್ಲದೆ ಇರುವುದರಿಂದ ವಿದ್ಯಾರ್ಥಿನಿಯರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿನಿಯರ ಯಾವುದೇ ಸಮಸ್ಯೆಗಳಿಗೆ ವಾರ್ಡನ್ ಸರಿಯಾಗಿ ಸ್ಪಂಧಿಸುತ್ತಿಲ್ಲ. ಇದರಿಂದ ನರಕಯಾತನೆ ಅನುಭವಿಸುವಂತಾಗಿದೆ ಎಂದು ದೂರಿದರು.
ಕೂಡಲೇ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸಂಬಂಧಪಟ್ಟ ಆಧಿಕಾರಿಗಳು ಬಗಹರಿಸಬೇಕು. ಇಲ್ಲವಾದಲ್ಲಿ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಖಾಸಗಿಯಲ್ಲಿ ಅಕ್ಕಿ ಖರೀದಿ
ಸರ್ಕಾರದಿಂದ ಬರಬೇಕಾದ ಅಕ್ಕಿ ಮತ್ತು ಗೋಧಿ ಇನ್ನು ಬಿಡುಗಡೆಯಾಗದ ಕಾರಣ ಅಕ್ಕಿಯನ್ನು ಕೆಜಿ ಗೆ 30 ರು.ನಂತೆ ಖಾಸಗಿಯಲ್ಲಿ ಖರೀದಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಸರ್ಕಾರದಿಂದ ಆಹಾರ ಪದಾರ್ಥ ವಿತರಣೆಯಾಗುವುದು ತಡವಾಗುತ್ತಿರುವುದರಿಂದ ಸ್ವಲ್ಪಮಟ್ಟಿಗೆ ತೊಂದರೆಯಾಗುತ್ತಿದೆ. ಸರ್ಕಾರ ಈಗ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾಸಿಕ ಹಣವನ್ನು ಹೆಚ್ಚು ಮಾಡಿದೆ. ಬಜೆಟ್ನಲ್ಲಿ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಒಂದು ಸಾವಿರ ರು. ನಿಗದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ವಿದ್ಯಾರ್ಥಿನಿಯರಿಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ ಹಾಗೂ ಸರ್ಕಾರದಿಂದ ಆಹಾರ ಪದಾರ್ಥ ವಿತರಣೆಯಾಗುವುದರಿಂದ ಸಮಸ್ಯೆಗಳು ಆದಷ್ಟು ಬೇಗ ಬಗೆಹರಿಯಲಿದೆ. ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಆಳವಡಿಸಿರುವ ಬಯೋ ಮೆಟ್ರಿಕ್ ವ್ಯವಸ್ಥೆಯಲ್ಲಿ ಹಾಜರಾತಿ ಪ್ರತಿನಿತ್ಯ ಹಾಕಲೇ ಬೇಕು
ಟಿ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ