ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

18 ಲಕ್ಷ ಮೌಲ್ಯ ವಸ್ತುಗಳು ಪೊಲೀಸರಿಂದ ವಾರಸುದಾರರಿಗೆ

Rashmi Kasaragodu
Updated On : 8 Aug 2013, 12:05 pm

ಕನ್ನಡಪ್ರಭ ವಾರ್ತೆ, ಹಾಸನ. ಆ 7
ಒಟ್ಟು 24 ಪ್ರಕರಣಗಳಲ್ಲಿ 21 ಆರೋಪಿಗಳನ್ನು ಬಂಧಿಸಿ, 18,25,636 ರು. ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಬುಧವಾರ ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಡಾ.ಕೆ.ರಾಮಚಂದ್ರರಾವ್ ಹಿಂದಿರುಗಿಸಿದರು.
ಹಾಸನ ನಗರ ವೃತ್ತ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 8,42,636 ರು.ಮೌಲ್ಯದ ಚಿನ್ನಾಭರಣ, 5,40 ಲಕ್ಷ ರು.ಮೌಲ್ಯದ ಕಾರು ಮತ್ತು ದ್ವಿಚಕ್ರ ವಾಹನಗಳು ಹಾಗೂ ಇತರೆ 1,18,500 ರು.ಮೌಲ್ಯದ ಇತರೆ ವಸ್ತುಗಳು. ಹಾಸನ ಗ್ರಾಮಾಂತರ ವೃತ್ತ ಠಾಣಾ ವ್ಯಾಪ್ತಿಯಲ್ಲಿ 2,90 ಲಕ್ಷ ರು.ಮೌಲ್ಯದ ದ್ವಿಚಕ್ರವಾಹನಗಳು, ಅರಸೀಕೆರೆ ಗ್ರಾಮಾಂತರ ವೃತ್ತ ಠಾಣಾ ವ್ಯಾಪ್ತಿಯಲ್ಲಿ 19,500 ರು.ಮೌಲ್ಯದ ಚಿನ್ನಾಭರಣ, 15 ಸಾವಿರ ರು.ಮೌಲ್ಯದ ನಗದು ಹಣ ಸೇರಿದಂತೆ ಒಟ್ಟಾರೆಯಾಗಿ 34,500 ರು.ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ನೀಡಲಾಯಿತು.
ಕಳೆದ ಏಪ್ರಿಲ್ನಿಂದ ಜೂನ್ ಕೊನೆಯವರೆಗೆ 53 ಪ್ರಕರಣಗಳನ್ನು ಪತ್ತೆ ಮಾಡಿ 38 ಜನ ಆರೋಪಿಗಳನ್ನು ಬಂಧಿಸಿದ್ದು, 50,38,392 ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಂತಾರಾಜ್ಯ ಕಳ್ಳನ ಬಂಧನ: ಅರಸೀಕೆರೆ ನಗರ ಠಾಣೆಯಲ್ಲಿ ಇತ್ತೀಚೆಗೆ ಮನೆಕಳವು ಪ್ರಕರಣ ನಡೆದಿದ್ದು, ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಹಾಸನ ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಿ ಪತ್ತೆ ಕಾರ್ಯಕೈಗೊಂಡು ಆಂಧ್ರಪ್ರದೇಶದ ವಿಜಯವಾಡದ ಮಣಿ (30), ಕಾಸರಗೋಡು ಜಿಲ್ಲೆಯಲ್ಲಿ ವಾಸವಾಗಿದ್ದು, ಆತನನ್ನು ಬಂಧಿಸಲಾಗಿದೆ. ಈತ 10 ಲಕ್ಷ ರು.ಮೌಲ್ಯದ ಚಿನ್ನಾಭರಣ ಕಳವು ಮಾಡಿರುವುದು ಪತ್ತೆಯಾಗಿದ್ದು, ಆತನಿಂದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯ ಪೊಲೀಸ್ ಸಿಬ್ಬಂದಿ ಪರಿಶ್ರಮದಿಂದ ದಕ್ಷಣಿ ವಲಯದಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶೇ.45ರಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಮೂರು ತಿಂಗಳಿಗೊಮ್ಮೆ ಪತ್ತೆಯಾದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ವ್ಯವಸ್ಥೆಯ ಕೈಗೊಳ್ಳಲಾಗಿದೆ. ಆದರೆ ಕಳೆದ 2 ತಿಂಗಳ ಹಿಂದೆ ಚುನಾವಣೆ ಬಂದಿದ್ದರಿಂದ ಪತ್ತೆ ಕಾರ್ಯಕ್ಕೆ ಸ್ವಲ್ವ ಹಿನ್ನಡೆಯಾಗಿದೆ ಅಷ್ಟೇ ಎಂದು ಐಜಿಪಿ ರಾಮಚಂದ್ರರಾವ್ ಹೇಳಿದರು.
ಕಳೆದ 20ರಿಂದ 25 ವರ್ಷಗಳ ಹಿಂದಿನ ಹಳೇ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದರು.
ಹಾಸನ, ಮಂಡ್ಯ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳ ಅಪಘಾತಗಳು ಹೆಚ್ಚಾಗುತ್ತಿದ್ದು, ಈ ಪ್ರಕರಣಗಳನ್ನು ತನಿಖೆ ಕೈಗೊಳ್ಳಲಾಗಿದೆ ಎಂದ ಅವರು, ನಗರದ ಕೆನರಾ ಬ್ಯಾಂಕ್ನ ಎಟಿಎಂ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಮಂಗಳೂರಿನ ಬ್ಯಾಂಕ್ಗಳಲ್ಲಿ ನಡೆದಿರುವಂತಹ ಎಟಿಎಂ ಕಳವು ಪ್ರಕರಣಕ್ಕೆ ಸ್ವಲ್ಪ ಹೋಲಿಕೆ ಇದ್ದು, ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಹೇಳಿದರು.
ಪೊಲೀಸ್ ಸಿಬ್ಬಂದಿಗೆ ಕಳೆದ 4 ತಿಂಗಳಿನಿಂದ ಅಕ್ಕಿ ವಿತರಣೆಯಾಗುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮಚಂದ್ರರಾವ್, ಬಜೆಟ್ನಲ್ಲಿ ಅದಕ್ಕಾಗಿ ಹಣವನ್ನು ಬಿಡುಗಡೆ ಮಾಡಿದ್ದು, ಅಲ್ಲಿಂದ ಹಣ ಬರುವುದು ಸ್ವಲ್ಪ ನಿಧಾನವಾಗಿದೆ ಅಷ್ಟೇ. ಕೂಡಲೇ ಅಕ್ಕಿಯ ವಿತರಣೆ ಪ್ರಕ್ರಿಯೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ನಾಗರಿಕರಿಗೆ ಸನ್ಮಾನ: ಬೇಲೂರು ಬಸ್ ದುರಂತಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರನ್ನು ಕಾಪಾಡಿದಂತಹ ಸಾರ್ವಜನಿಕರಾದ ಬೇಲೂರಿನ ದುರ್ಗಾನಗರವಾಸಿ ಮೀನುಗಾರ ಹನುಮಂತ, ತೌಫಿಕ್, ರವಿ, ಜಾಕೀರ್ ಹುಸೇನ್, ಅರಣ್, ಹರೀಶ್ ಬಿಕ್ಕೋಡು, ಆಟೋಚಾಲಕ ಮಲ್ಲೇಶ್, ಚನ್ನಕೇಶವ ದೇವಸ್ಥಾನದ ವ್ಯವಸ್ಥಾಪಕ ಉಪ ಸಮಿತಿ ಅಧ್ಯಕ್ಷ ಸಂತೋಷ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ವಿತರಿಸಿದ ನಂತರ ಜನಸಂಪರ್ಕಸಭೆ ನಡೆಸಲಾಯಿತು. ಜಿಲ್ಲಾ ಎಸ್ಪಿ ರವಿ.ಡಿ.ಚನ್ನಣ್ಣನವರ್, ಹೆಚ್ಚುವರಿ ಎಸ್ಪಿ ಜೆ.ಕೆ.ರಶ್ಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement