ಎವಿಕೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಸಿಎ ಕುರಿತು ಉಪಯುಕ್ತ ಮಾಹಿತಿ
ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.
ಮೋರೇಸ್ ಸಿಎ ಅಕಾಡೆಮಿ ವ್ಯವಸ್ಥಾಪಕ ಶಶಾಂಕ ಮೋರೆ ಅವರು, ಬಿ.ಕಾಂ ಹಾಗೂ ಬಿಬಿಎಂ ವಿದ್ಯಾರ್ಥ್ಥಿನಿಯರಿಗೆ ಸಿಎ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಶಾರದಾ ಮಾತನಾಡಿ, ಭಾರತಕ್ಕೆ ಇದೀಗ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಲೆಕ್ಕ ಪರಿಶೋಧಕರ ಅವಶ್ಯಕತೆ ಇದೆ. ಆದ್ದರಿಂದ ವಿದ್ಯಾರ್ಥಿನಿಯರು ಮೋರೆ ಅವರು ನೀಡಿದ ಮಾಹಿತಿ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಕೆ.ಎಚ್.ಸೀತಾಲಕ್ಷ್ಮಿ ಮಾತನಾಡಿ, ಸಿಎ ಪ್ರಸ್ತುತ ಅರ್ಥ ವ್ಯವಸ್ಥೆಯಲ್ಲಿ ಹಣದುಬ್ಬರ, ಹಿಂಜರಿತ, ಆರ್ಥಿಕ ಮುಗ್ಗಟ್ಟು, ಜಾಗತೀಕರಣ ಮುಂತಾದವುಗಳಿಂದ ತೊಂದರೆಗೊಳಗಾಗದ ವೃತ್ತಿಪರ ಶಿಕ್ಷಣವಾಗಿದೆ. ವಿದ್ಯಾರ್ಥಿನಿಯರು ತಮ್ಮ ಪದವಿಯೊಂದಿಗೆ ಅಂಥಹ ಕೋರ್ಸನ್ನು ಮುಂದುವರಿಸಬೇಕೆಂದು ಹೇಳಿದರು.
ಕಾಲೇಜಿನ ಉದ್ಯೋಗ ಮತ್ತು ಮಾಹಿತಿ ಕೇಂದ್ರದ ಅಧ್ಯಾಪಕ ಸಂಚಾಲಕಿ ಪ್ರೊ. ಪಿ.ಎಸ್.ಆಶಾ ಸ್ವಾಗತಿಸಿದರು. ಪ್ರೊ. ನಸರೀನ್ ಪಾತಿಮಾ ಬಾನು ಹಾಗೂ ಬಿ.ಎನ್.ಶೃತಿ ಇದ್ದರು. ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಮಿಸ್ಬಾ ಮುಕರಮು ವಂದಿಸಿದರು.