ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚಿರತೆ ದಾಳಿಯಿಂದ ಮೃತಪಟ್ಟ 'ದಲಿತ' ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಡಿಎಫ್ಓ ನಿರ್ಲಕ್ಷ್ಯ

Rashmi Kasaragodu
Updated On : 8 Aug 2013, 12:06 pm

ಕ.ಪ್ರ.ವಾರ್ತೆ   ಹಾಸನ   ಆ. 7
ಚಿರತೆ ದಾಳಿಯಿಂದ ಮೃತಪಟ್ಟಿರುವ ಹೊಳೆನರಸೀಪುರ ತಾಲೂಕು ಹರದನಹಳ್ಳಿಯ ದಲಿತ ಮಹಿಳೆ ಸಣ್ಣಮ್ಮ ಕುಟುಂಬ ವರ್ಗಕ್ಕೆ ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ದಲಿತ ಸಾಹಿತ್ಯ ಪರಿಷತ್ ಒತ್ತಾಯಿಸಿದೆ.
ಜೂನ್ 13 ರಂದು ಬಹಿರ್ದೆಸೆಗೆ ಹೋಗಿದ್ದ ಸಣ್ಣಮ್ಮನನ್ನು ಚಿರತೆಯೊಂದು ಎಳೆದೊಯ್ದು ತಿಂದು ಹಾಕಿತ್ತು. ಮೃತ ಮಹಿಳೆಯೆ ಶವ ಪತ್ತೆಯಾಗಿದ್ದು ಈ ಶವ ಸಣ್ಣಮ್ಮನದೇ ಎಂದು ಸಾಬೀತಾಗಿದೆ. ಅರಣ್ಯ ಇಲಾಖೆಯು ತನಿಖೆ ನಡೆಸಿ ಯಾವುದೋ ಕಾಡುಮೃಗದಿಂದ ಮೃತಪಟ್ಟಿದ್ದಾರೆ ಎಂದು ವರದಿ ಕೊಟ್ಟಿದೆ.
ಹೀಗಿದ್ದರೂ ಹಾಸನ ಡಿಎಫ್ಓ ಪರಿಹಾರ ಹಣ ನೀಡಲು ಮುಂದಾಗಿಲ್ಲ. ದಲಿತ ಮಹಿಳೆ ಎಂಬ ಕಾರಣಕ್ಕೆ ಹಣ ಬಿಡುಗಡೆ ಮಾಡಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಕೆ.ಪಿ. ಮೋಹನ್ರಾಜ್ ಅವರಿಗೆ ಮನವಿ ಮಾಡಿದ್ದಾಗ ಕೂಡಲೇ ಹಣ ಬಿಡುಗಡೆ ಮಾಡುವಂತೆ ಆದೇಶಿಸಿದ್ದರು. ಆದರೆ ಡಿಸಿ ಅವರ ಆದೇಶಕ್ಕೂ ಬೆಲೆ ಕೊಡದ ಡಿಎಫ್ಓ ಸ್ಥಳೀಯ ಕೆಲ ಕಿಡಿಗೇಡಿಗಳ ಮೂಗರ್ಜಿಯ ಕಾರಣ ಇಟ್ಟುಕೊಂಡು ಕುಟುಂಬವರ್ಗವನ್ನು ನಿತ್ಯ ಅಲೆಸುತ್ತಿದ್ದಾರೆ.
ಮಹಿಳೆ ಸಾವು ಪ್ರಾಣಿಗಳಿಂದ ಸಂಭವಿಸಿಲ್ಲ. ಇದೊಂದು ಕೊಲೆ, ದಲಿತ ಮಹಿಳೆ ಇವರಿಗೇಕೆ ಪರಿಹಾರ ಕೊಡುತ್ತೀರಿ ಎಂದು ಕೆಲ ಸ್ಥಳೀಯ ಮುಖಂಡರು ಪತ್ರ ಬರೆದು ದಲಿತರ ಸಾವಿನಲ್ಲೂ ಕೀಳು ರಾಜಕಾರಣ ಮಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ. ಇವರ ಮಾತನ್ನು ಕೇಳಿಕೊಂಡು ಪರಿಹಾರ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವ ಡಿಎಫ್ಓ ಮೃತ ಕುಟುಂಬ ವರ್ಗದವರಿಗೆ ಕಿರುಕುಳ ನೀಡುತ್ತಿದ್ದಾರೆ. ಕಳೆದ 2 ತಿಂಗಳಿಂದ ಕುಟುಂಬವನ್ನು ಅಲೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ಮೃತ ಕುಟುಂಬಕ್ಕೆ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ಎಂದು ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಸತೀಶ್, ಮಾದಿಗ ದಂಡೋರ ವಿಜಯ್ಕುಮಾರ್, ನಾರಾಯಣದಾಸ್ ಪೆನ್ಸನ್ ಮೊಹಲ್ಲಾ ಕುಮಾರ್ ಹಾಗೂ ಇತರರು ಒತ್ತಾಯಿಸಿದ್ದಾರೆ.
ಮೃತ ಕುಟುಂಬ ವರ್ಗ ಇಂದಿಗೂ ಕೂಲಿ ಮಾಡಿಕೊಂಡು ಬದುಕುತ್ತಿದ್ದಾರೆ. ಜೀವನಕ್ಕೆ ಬೇರೆ ಯಾವುದೇ ಜಮೀನು ಇಲ್ಲ. ಜಿಲ್ಲಾಧಿಕಾರಿಗಳು ತಕ್ಷಣವೇ ಪರಿಹಾರ ಬಿಡುಗಡೆ ಮಾಡುವಂತೆ ಡಿಎಫ್ಓಗೆ ಆದೇಶಿಸಬೇಕು ಇಲ್ಲದಿದ್ದಲ್ಲಿ ಡಿಎಫ್ಓ ಅವರ ದಲಿತ ವಿರೋಧಿ ನೀತಿ ಖಂಡಿಸಿ ಡಿಎಫ್ಓ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement