ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ. ಬಂಗಾಳ ಸಿಪಿಎಂ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Rashmi Kasaragodu
Updated On : 8 Aug 2013, 12:06 pm

ಕ.ಪ್ರ.ವಾರ್ತೆ   ಹಾಸನ   ಆ 7
ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಕಾರ್ಯಕರ್ತರ ಮೇಲೆ ತೃಣಮೂಲ ಕಾಂಗ್ರೆಸಿಗರು ಗೂಂಡಾಗಿರಿ ದೌರ್ಜನ್ಯ ಎಸಗುತ್ತಿದ್ದಾರೆಂದು ಖಂಡಿಸಿ ಹಾಗೂ ಅವರನ್ನು ಬಂಧಿಸಿರುವಂತೆ ಆಗ್ರಹಿಸಿ ಬುಧವಾರ ಸಿಪಿಎಂ ಕಾರ್ಯಕರ್ತರು ಮಾಜಿ ಶಾಸಕ ಶ್ರೀರಾಮರೆಡ್ಡಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯ ಮುಂದೆ ಕೆಲಸ ಸಮಯ ಧರಣಿ ನಡೆಸಿದರು. ನಂತರ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಕ್ಸ್ವಾದದ ತತ್ವ ಸಿದ್ದಾಂತ ಹೊಂದಿರುವತಹ ಸಿಪಿಎಂನ್ನು ಸಂಪೂರ್ಣವಾಗಿ ಮುಗಿಸಲು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸಿಗರು ಆಕ್ರಮಣಕಾರಿ ದಾಳಿಯನ್ನು ನಡೆಸುತ್ತಿದ್ದಾರೆ. ಅಲ್ಲಿ ಪಕ್ಷದ ಕಾರ್ಯಕರ್ತರ ಕಗ್ಗೊಲೆಯನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಸರ್ಕಾರವಾಗಲೀ ಅಥವಾ ಕೇಂದ್ರ ಸರ್ಕಾರವಾಗಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಪಕ್ಷದ ಕಾರ್ಯಕರ್ತರ ವಿರುದ್ಧ ದಾಳಿ ಮಾಡುವಂತೆ ಮಾವೋವಾದಿಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಮೌಲ್ಯಕ್ಕೆ ಅಲ್ಲಿನ ತೃಣಮೂಲ ಕಾಂಗ್ರೆಸಿಗರು ತಿಲಾಂಜಲಿ ಇಟ್ಟಿದ್ದಾರೆ. ಅಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.  ಅಲ್ಲದೆ ಅವರು ಫ್ಯಾಸಿಸ್ಟ್ರಂತೆ ದಾಳಿ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.
ಸಾಮ್ರಾಜ್ಯಶಾಹಿ ನೀತಿಗಳಾದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸಂದರ್ಭದಲ್ಲಿ ಮಾರ್ಕ್ಸ್ವಾದ ತತ್ವ-ಚಿಂತನೆಗಳು ಅನಿವಾರ್ಯವಾಗಿದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಬಂಡವಾಳಶಾಹಿಗಳು ಹಾಗೂ ರಾಜಕೀಯ ಪಕ್ಷಗಳು ಶಾರೀರವಾಗಿ, ತಾತ್ವಿಕವಾಗಿ ಹಾಗೂ ರಾಜಕೀಯವಾಗಿ ಮಾರ್ಕ್ಸ್ವಾದದ ತತ್ವ-ಚಿಂತನೆಯನ್ನು ಹೊಂದಿರುವ ಮೂಲ ಸಿಪಿಎಂ ನ್ನು ಮೂಲೆ ಗುಂಪು ಮಾಡುತ್ತಿದ್ದು, ಪಕ್ಷದ ಕಾರ್ಯಕರ್ತರು ಎಚ್ಚೆತ್ತು ಸಂಘಟನೆಗೆ ಮುಂದಾಗಬೇಕು ಎಂದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ. ಅಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾವೋವಾದಿಗಳು ಸಿಪಿಎಂ ಕಾರ್ಯಕರ್ತರ ಮೇಲೆ ಮಾಡುತ್ತಿರುವ ದೌರ್ಜನ್ಯಗಳನ್ನು ಅರಿತರು ಸಹ ಹಿಂದೆ ಗೃಹಸಚಿವರಾಗಿದ್ದಂತಹ ಚಿದಂಬರಂ ಹಾಗೂ ಈಗಿನ ಮಂತ್ರಿಗಳು ಸಹ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಚಿದಂಬರಂ ಅವರು ನಮ್ಮ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿಸಿದರು. ಪಕ್ಷದ ಕಾರ್ಯಕರ್ತರ ಮೇಲೆ ದಾಳಿಗಳು ಹೆಚ್ಚಾದರೂ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಸಿಪಿಎಂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ತಡೆಗಟ್ಟಬೇಕು ಹಾಗೂ ತೃಣಮೂಲ ಕಾಂಗ್ರೆಸ್ನ ಗೂಂಡಾಗಿರಿ ಮಾಡುತ್ತಿರುವವರನ್ನು ಬಂಧಿಸಿರುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ಕಾಂ ವಿ.ಸುಕುಮಾರ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಕಾಂ ಎಸ್.ವರಲಕ್ಷ್ಮಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಕಾಂ ಗಳಾದ ನಿತ್ಯಾನಂದ್, ಬಸವರಾಜು, ಶಂಕರ್, ಬಿ.ಮಾಧವ್, ಸತ್ಯನಾರಾಯಣ್, ಹರೀಶ್, ಅರವಿಂದ್, ಪೃಥ್ವಿ ಹಾಗೂ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement